ವಿಜಯಪುರ: ಸಿಂದಗಿ ತಾಲೂಕಿನ ಗಣಿಹಾರ ಗ್ರಾಮದಲ್ಲಿ ಸೋಮವಾರ ತಡರಾತ್ರಿ ವ್ಯಕ್ತಿಯೊಬ್ಬ ಕೌಟುಂಬಿಕ ಕಲಹದ ಕಾರಣ ಪತ್ನಿಯನ್ನು ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನು ಎರಡು ತುಂಡಾಗಿ ಕತ್ತರಿಸಿ ಬಾವಿಗೆ ಎಸೆದಿದ್ದಾನೆ.
46 ವರ್ಷದ ನೀಲಮ್ಮ ಕೊಲೆಯಾದ ಮಹಿಳೆ. ಪತಿ ಪರಮಾನಂದ ಕೊಲೆ ಆರೋಪಿಯಾಗಿದ್ದು, ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಿಗ್ಗೆ ಮನೆಯಲ್ಲಿ ತಂದೆ, ತಾಯಿ ಕಾಣದಿದ್ದಾಗ ಇಬ್ಬರು ಮಕ್ಕಳು ಹುಡುಕಾಟ ನಡೆಸಿದ್ದಾರೆ. ಜಮೀನಿನಲ್ಲಿ ಹುಡುಕಾಡಿದಾಗ ಮೆಕ್ಕೆಜೋಳದ ಹೊಲದಲ್ಲಿನ ಒಂದು ಬದುವಿನಲ್ಲಿ ರಕ್ತ ಬಿದ್ದಿರುವುದು ಕಂಡು ಬಂದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಹುಡುಕಾಟ ನಡೆಸಿದ್ದಾರೆ. ಆಗ ಬಾವಿಯಲ್ಲಿ ತಲೆಯಿಂದ ಸೊಂಟದವರೆಗೆ ಒಂದು ಭಾಗ ಮಾತ್ರ ಇದ್ದ ನೀಲಮ್ಮಳ ಶವ ಸಿಕ್ಕಿದೆ. ಸೊಂಟದ ಕೆಳಗಿನ ಭಾಗ ಸಿಕ್ಕಿಲ್ಲ. ದೇಹದ ಇನ್ನೊಂದು ಭಾಗಕ್ಕಾಗಿ ಹುಡುಕಾಟ ನಡೆಸಲಾಗಿದೆ. ಪೊಲೀಸರ ತನಿಖೆ ಕೈಗೊಂಡಿದ್ದಾರೆ.