ಉದಯಪುರದ 55 ವರ್ಷದ ಮಹಿಳೆ 17 ನೇ ಮಗುವಿಗೆ ಜನ್ಮ ನೀಡಿದ್ದಾರೆ. ಅವರ ಕುಟುಂಬಕ್ಕೆ ಸ್ವಂತ ಮನೆಯೂ ಇಲ್ಲ, ಚಿಂದಿ ಆಯ್ದು ಜೀವನ ಸಾಗಿಸುತ್ತಿದ್ದಾರೆ.
ಹೌದು, ಉದಯಪುರದ 55 ವರ್ಷದ ಮಹಿಳೆ ಮಂಗಳವಾರ ತನ್ನ 17 ನೇ ಮಗುವಿಗೆ ಜನ್ಮ ನೀಡಿದ್ದಾರೆ. ರೇಖಾ ಗಲ್ಬೆಲಿಯಾ ಎಂಬ ಮಹಿಳೆ ಈ ಹಿಂದೆ 16 ಮಕ್ಕಳಿಗೆ ಜನ್ಮ ನೀಡಿದ್ದರು. ಅವರ ನಾಲ್ವರು ಗಂಡು ಮಕ್ಕಳು ಮತ್ತು ಒಬ್ಬ ಮಗಳು ಹುಟ್ಟಿದ ಕೂಡಲೇ ಮೃತಪಟ್ಟಿದ್ದಾರೆ. ಅವರ ಬದುಕುಳಿದ ಮಕ್ಕಳಲ್ಲಿ ಐದು ಮಂದಿ ವಿವಾಹಿತರು ಮತ್ತು ಈಗಾಗಲೇ ತಮ್ಮದೇ ಆದ ಮಕ್ಕಳನ್ನು ಕೂಡ ಹೊಂದಿದ್ದಾರೆ.
ಅವರ ಮಗಳು ಶಿಲಾ ಕಲ್ಬೆಲಿಯಾ ಕುಟುಂಬದ ಸಂಕಷ್ಟವನ್ನು ಹೇಳಿಕೊಂಡಿದ್ದು, ನಾವೆಲ್ಲರೂ ಬಹಳಷ್ಟು ಕಷ್ಟಗಳನ್ನು ಎದುರಿಸಬೇಕಾಯಿತು. ನಮ್ಮ ತಾಯಿಗೆ ಇಷ್ಟೊಂದು ಮಕ್ಕಳಿದ್ದಾರೆ ಎಂದು ಕೇಳಿ ಎಲ್ಲರೂ ಅಚ್ಚರಿಗೊಳಗಾಗಿದ್ದಾರೆ ಎಂದು ಹೇಳಿದ್ದಾರೆ.
ರೇಖಾ ಅವರ ಪತಿ ಕಾವ್ರಾ ಕಲ್ಬೆಲಿಯಾ, ಕುಟುಂಬದ ಆರ್ಥಿಕ ಸಂಕಷ್ಟಗಳನ್ನು ತಿಳಿಸಿ, ಸ್ವಂತ ಮನೆ ಇಲ್ಲ ಮತ್ತು ಜೀವನ ನಿರ್ವಹಣೆಗೆ ಕಷ್ಟಪಡುತ್ತಿದ್ದೇವೆ. ನಮ್ಮ ಮಕ್ಕಳಿಗೆ ಆಹಾರ ನೀಡಲು, ನಾನು ಶೇ. 20 ರಷ್ಟು ಬಡ್ಡಿಗೆ ಬಡ್ಡಿದಾರರಿಂದ ಸಾಲ ಪಡೆಯಬೇಕಾಯಿತು. ನಾನು ಲಕ್ಷಾಂತರ ರೂಪಾಯಿಗಳನ್ನು ಮರುಪಾವತಿಸಿದ್ದೇನೆ, ಆದರೆ ಸಾಲದ ಬಡ್ಡಿಯನ್ನು ಇನ್ನೂ ಸಂಪೂರ್ಣವಾಗಿ ಪಾವತಿಸಲಾಗಿಲ್ಲ ಎಂದು ಹೇಳಿದ್ದಾರೆ.
ಸ್ಕ್ರ್ಯಾಪ್ ಸಂಗ್ರಹಿಸಿ ಜೀವನ ನಡೆಸುವ ಕುಟುಂಬವು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಒದಗಿಸಲು ಸಹ ಸಾಧ್ಯವಾಗುತ್ತಿಲ್ಲ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಮನೆ ಮಂಜೂರಾಗಿದ್ದರೂ, ಭೂಮಿ ನಮ್ಮ ಹೆಸರಿನಲ್ಲಿಲ್ಲದ ಕಾರಣ ನಾವು ನಿರಾಶ್ರಿತರಾಗಿಯೇ ಉಳಿದಿದ್ದೇವೆ. ಆಹಾರ, ಮದುವೆ ಅಥವಾ ಶಿಕ್ಷಣಕ್ಕೆ ನಮ್ಮಲ್ಲಿ ಸಾಕಷ್ಟು ಸಂಪನ್ಮೂಲಗಳಿಲ್ಲ. ಈ ಸಮಸ್ಯೆಗಳು ಪ್ರತಿದಿನ ನಮ್ಮನ್ನು ಕಾಡುತ್ತಿವೆ” ಎಂದು ಕಾವ್ರಾ ಹೇಳಿದ್ದಾರೆ.
ಜಾಡೋಲ್ ಸಮುದಾಯ ಆರೋಗ್ಯ ಕೇಂದ್ರದ ಸ್ತ್ರೀರೋಗ ತಜ್ಞ ರೋಶನ್ ದರಂಗಿ, ಕುಟುಂಬವು ಆರಂಭದಲ್ಲಿ ರೇಖಾ ಅವರ ವೈದ್ಯಕೀಯ ಇತಿಹಾಸವನ್ನು ತಪ್ಪಾಗಿ ನಿರೂಪಿಸಿತು. ರೇಖಾ ಅವರನ್ನು ದಾಖಲಿಸಿದಾಗ, ಕುಟುಂಬವು ಇದು ಅವರ ನಾಲ್ಕನೇ ಮಗು ಎಂದು ನಮಗೆ ತಿಳಿಸಿತು. ನಂತರ, ಇದು ಅವರ 17 ನೇ ಮಗು ಎಂದು ತಿಳಿದುಬಂದಿದೆ ಎಂದು ಹೇಳಿದ್ದಾರೆ.