ಕೊಪ್ಪಳ: ಸ್ಲೀಪರ್ ಕೋಚ್ ಬಸ್ ನಲ್ಲಿ ನಿದ್ದೆ ಮಾಡಲು ತೊಂದರೆ ಅನುಭವಿಸಿದ ಪ್ರಯಾಣಿಕರೊಬ್ಬರಿಗೆ 3000 ರೂ. ಪರಿಹಾರ ಹಾಗೂ 3000 ರೂ. ದೂರಿನ ಖರ್ಚನ್ನು ಪಾವತಿಸುವಂತೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ, ಕಲಬುರಗಿ ಸಂಸ್ಥೆಯಿಂದ ಫಿರ್ಯಾದುದಾರರಿಗೆ ಉಂಟಾದ ಸೇವಾ ನ್ಯೂನ್ಯತೆಯಿಂದ ಆದ ತೊಂದರೆಗಾಗಿ ಪರಿಹಾರ ಮೊತ್ತವನ್ನು ಪಾವತಿಸುವಂತೆ ಆದೇಶಿಸಿ, ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ತೀರ್ಪು ಪ್ರಕಟಿಸಿದೆ.
ಫಿರ್ಯಾದುದಾರರಾದ ಗಂಗಾವತಿ ತಾಲ್ಲೂಕಿನ ಬಸಾಪಟ್ಟಣದ ನಿವಾಸಿ ಹಾಗೂ ವಕೀಲರಾದ ವೆಂಕಟೇಶ ಬಿ. ಅವರು ಎದುರುದಾರರಾದ ವ್ಯವಸ್ಥಾಪಕ ನಿರ್ದೇಶಕರು, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕಲಬುರಗಿ ರವರ ವಿರುದ್ದ ಸಲ್ಲಿಸಿದ ದೂರಿನನ್ವಯ, ದೂರುದಾರರು ಸ್ಲೀಪರ್ ಬಸ್ ನಂ: ಕೆಎ-35/ಎಫ್-0198ನಲ್ಲಿ ದಿನಾಂಕ:20-12-2024 ರಂದು ಆಸನ ಸಂಖ್ಯೆ 5, 6 ಮತ್ತು 10 ಅನ್ನು ಬುಕಿಂಗ್ ಮಾಡಿ ರೂ:1653/-ಗಳನ್ನು ಪಾವತಿಸಿ, ಅದೇ ದಿನ ರಾತ್ರಿ 11 ಘಂಟೆಯ ಸುಮಾರಿಗೆ ಕಲಬುರಗಿಯಿಂದ ಗಂಗಾವತಿಗೆ ಪ್ರಯಾಣಿಸುತ್ತಿದ್ದರು.
ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ಬಸ್ ನಲ್ಲಿ ಬಸ್ ನ ಕಿಟಕಿ ಸರಿಯಾಗಿ ಲಾಕ್ ಆಗದೇ ಪದೇ ಪದೇ ತೆರೆದುಕೊಳ್ಳುತ್ತಿದ್ದು, ಕಿಟಕಿಯಿಂದ ಚಳಿ ಗಾಳಿ ಬೀಸುತ್ತಿದ್ದರಿಂದ ಹಾಗೂ ಬಸ್ ನಲ್ಲಿ ದೂರುದಾರರ ಸೀಟಿನ ಹತ್ತಿರ ಲೈಟ್ ಇಲ್ಲದೇ ಇರುವುದರಿಂದ ಹಾಗೂ ದೂರುದಾರರು ಕುಳಿತಿದ್ದ ಸೀಟಿನ ಬೆಡ್ ಅಸ್ವಚ್ಚವಾಗಿ ಹಾಗೂ ಅವ್ಯವಸ್ಥಿತವಾಗಿ ಇದುದ್ದರಿಂದ ದೂರುದಾರರು ರಾತ್ರಿ ಇಡೀ ನಿದ್ದೆ ಮಾಡದೇ ತೊಂದರೆಯನ್ನು ಅನುಭವಿಸಿರುತ್ತಾರೆ.
ಈ ಅವ್ಯವಸ್ಥೆಯ ಬಗ್ಗೆ ಬಸ್ಸಿನ ಡ್ರೈವರ್ ಗೆ ತಿಳಿಸಿದಾಗ್ಯೂ ಸಹ ಸರಿಪಡಿಸದೇ ನಿರ್ಲಕ್ಷ್ಯ ತೋರಿರುತ್ತಾರೆ. ಆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಫೋನಿನ ಮೂಲಕ ತಿಳಿಸಿದಾಗ್ಯೂ ಸಹ ಸದರಿಯವರು ಮೇಲೆ ತಿಳಿಸಿದ ತೊಂದರೆಗಳನ್ನು ನಿವಾರಿಸುವಲ್ಲಿ ವಿಫಲರಾಗಿರುತ್ತಾರೆ ಹಾಗೂ ಬಸ್ ಹಳೆಯದಾಗಿರುತ್ತದೆಂದು ಉತ್ತರಿಸಿರುತ್ತಾರೆ. ಎದುರುದಾರರು ಪ್ರಯಾಣಿಕರಿಗೆ ಸುರಕ್ಷಿತ, ಉತ್ತಮ ಸೌಲಭ್ಯವನ್ನು ಒದಗಿಸಬೇಕಾಗಿದ್ದು ಅವರ ಕರ್ತವ್ಯವಾಗಿರುತ್ತದೆ. ದೂರುದಾರರು ತಮಗೆ ಉಂಟಾದ ತೊಂದರೆಗಳನ್ನು ಎದುರುದಾರ ಬಸ್ ನ ಚಾಲಕ ಮತ್ತು ಅಧಿಕಾರಿಗಳಿಗೆ ತಿಳಿಸಿದಾಗ್ಯೂ ಸಹ ತೊಂದರೆಗಳನ್ನು ನಿವಾರಿಸುವಲ್ಲಿ ವಿಫಲರಾಗಿ ಸೇವಾ ನ್ಯೂನ್ಯತೆಯನ್ನು ಎಸಗಿರುತ್ತಾರೆ. ಇದರಿಂದ ದೂರುದಾರರು ದೈಹಿಕ ಮತ್ತು ಮಾನಸಿಕವಾಗಿ ಯಾತನೆ ಅನುಭವಿಸಿರುತ್ತಾರೆ. ಇದರಿಂದ ಬೇಸತ್ತು ದೂರುದಾರರು ಎದುರುದಾರರಿಂದ ಪರಿಹಾರ ಕೋರಿ ದೂರನ್ನು ದಾಖಲಿಸಿರುತ್ತಾರೆ.
ದೂರುದಾರರ ದೂರನ್ನು ದಾಖಲಿಸಿಕೊಂಡ ನಂತರ ಎದುರುದಾರರಿಗೆ ಈ ಆಯೋಗದಿಂದ ನೋಟಿಸನ್ನು ನೀಡಿದ್ದು, ನೋಟಿಸ್ ಖುದ್ದು ಜಾರಿಯಾಗಿದ್ದು ಎದುರುದಾರರು ತಮ್ಮ ವಕೀಲರ ಮೂಲಕ ಹಾಜರಾಗಿ ಲಿಖಿತ ಆಕ್ಷೇಪಣೆಯನ್ನು ಮತ್ತು ದಾಖಲೆಗಳನ್ನು ಸಲ್ಲಿಸಿ ದೂರುದಾರರು ಅಪಾದನೆಗಳನ್ನು ಅಲ್ಲಗಳೆದಿರುತ್ತಾರೆ.
ದೂರನ್ನು ದಾಖಲಿಸಿದ ನಂತರ, ಆಯೋಗದ ಅಧ್ಯಕ್ಷರಾದ ಜಿ.ಇ. ಸೌಭಾಗ್ಯಲಕ್ಷ್ಮಿ ಹಾಗೂ ಸದಸ್ಯರಾದ ರಾಜು ಎನ್. ಮೇತ್ರಿ ರವರು ಎರಡು ಪಕ್ಷಕಾರರ ವಾದ ಪ್ರತಿವಾದಗಳನ್ನು ಆಲಿಸಿ, ದೂರುದಾರರಿಗೆ ಎದುರುದಾರರು ಬಸ್ ನ ಅವ್ಯವಸ್ಥೆಯ ಬಗ್ಗೆ ಉತ್ತಮ ಸೇವೆಯನ್ನು ನೀಡದೇ ನಿರಾಕರಿಸಿ, ನಿರ್ಲಕ್ಷ ತೋರಿ ಸೇವಾ ನ್ಯೂನ್ಯತೆಯನ್ನು ಎಸಗಿರುವುದು ಸಾಬೀತಾಗಿದೆ ಎಂದು ಪರಿಗಣಿಸಿ ದೂರನ್ನು ಭಾಗಶ: ಪುರಸ್ಕರಿಸಿ ದೂರುದಾರರು ಎದುರುದಾರರಿಂದ ಉಂಟಾದ ತೊಂದರೆಗಾಗಿ ಪರಿಹಾರ ಮೊತ್ತ ರೂ.3,000/-ಗಳನ್ನು ದೂರುದಾರರಿಗೆ ನೀಡುವಂತೆ ಆದೇಶಿಸಿರುತ್ತಾರೆ ಹಾಗೂ ದೂರಿನ ಖರ್ಚು ರೂ.3,000/-ಗಳನ್ನು ಈ ಆದೇಶದ ದಿನಾಂಕದಿಂದ 45 ದಿನಗಳ ಒಳಗಾಗಿ ಎದುರುದಾರರು ದೂರುದಾರರಿಗೆ ಪಾವತಿಸುವಂತೆ ಆದೇಶವನ್ನು ನೀಡಿರುತ್ತಾರೆ ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.