ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳ ಸಮಗ್ರ ಪರಿಷ್ಕರಣೆ ಕಾರ್ಯಕ್ಕೆ ಚಾಲನೆ ದೊರೆತಿದೆ. ಇದರಿಂದಾಗಿ ನೌಕರರ ವರ್ಗದಲ್ಲಿ ಆಶಾ ಭಾವನೆ ಮೂಡಿದೆ.
ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಎಲ್ಲಾ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳ ಪರಿಶೀಲಿಸಲಾಗುತ್ತಿದೆ. ಸಚಿವಾಲಯದ ಆಡಳಿತ ಇಲಾಖೆಗಳಲ್ಲಿ ಬರುವ ಕ್ಷೇತ್ರ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳ ಸಮಗ್ರ ಪರಿಷ್ಕರಣೆ ಬಗ್ಗೆ ಇತ್ತೀಚೆಗೆ ಕಾರ್ಯಾಗಾರ ನಡೆಸಲಾಗಿದೆ.
ಪರಿಷ್ಕರಣೆ ಪ್ರಸ್ತಾವನೆಗೆ ಅನುಗುಣವಾಗಿ ನಿಯಮದಂತೆ ಕ್ರಮ ಕೈಗೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಆರ್ಥಿಕ ಇಲಾಖೆಗಳ ಜೊತೆಗೆ ಸಮಾಲೋಚನೆ ನಡೆಸಲಾಗಿದ್ದು, ಪರಿಷ್ಕಣೆ ಪ್ರಗತಿಯಲ್ಲಿದೆ.
ಸರ್ಕಾರದ ಆದೇಶ, ಕಾಯ್ದೆಗಳು, ಕಾಲಕಾಲಕ್ಕೆ ಸೂಚನೆ ನೀಡಿದ ನಂತರವೂ 33 ಇಲಾಖೆಗಳಲ್ಲಿ 5 ವರ್ಷಕ್ಕೂ ಮೇಲ್ಪಟ್ಟು ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಷ್ಕರಿಸಿಲ್ಲ. ಕಾಲಕಾಲಕ್ಕೆ ಸಮಗ್ರ ಪರಿಷ್ಕರಿಸದಿದ್ದರೆ ಅರ್ಹರು ಸೇವಾನುಭವಕ್ಕೆ ಅನುಗುಣವಾದ ಹುದ್ದೆ ಮತ್ತು ಶ್ರೇಣಿಯಿಂದ ವಂಚಿತರಾಗುತ್ತಾರೆ. ಆಡಳಿತದ ಮೇಲೆ ಪರಿಣಾಮ ಬೀರುತ್ತದೆ ಎಂದು ನೌಕರರ ವರ್ಗ ಕಳವಳ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮ ಪರಿಷ್ಕರಣೆಗೆ ಚಾಲನೆ ನೀಡಲಾಗಿದೆ.