ಮಂಡ್ಯ: ಹುಟ್ಟುಹಬ್ಬಕ್ಕಾಗಿ ಹೊಸ ಬಟ್ಟೆ ಖರೀದಿಸಲು ಕುಟುಂಬದವರೊಂದಿಗೆ ತೆರಳಿದ್ದ 16 ವರ್ಷದ ಬಾಲಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.
ಮದ್ದೂರು ತಾಲೂಕು ಡಿ. ಮಲ್ಲಿಗೆರೆ ಗ್ರಾಮದ ಬೆಂಗಳೂರಿನಲ್ಲಿ ನೆಲೆಸಿರುವ ಉಮೇಶ್ -ಜಯಶೀಲಾ ದಂಪತಿಯ ಪುತ್ರ ಎಂ.ಯು. ಚಿರಾಗ್ ಗೌಡ(16) ಮೃತಪಟ್ಟ ಬಾಲಕ. ತಮ್ಮ ತಂದೆ, ತಾಯಿಯೊಂದಿಗೆ ಬಟ್ಟೆ ಖರೀದಿಸಲು ಮಾಲ್ ಗೆ ತೆರಳಿದ್ದ ವೇಳೆ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಚಿರಾಗ್ ಕುಸಿದು ಬಿದ್ದಿದ್ದಾನೆ. ಕೂಡಲೇ ಕುಟುಂಬದವರು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ, ಮಾರ್ಗಮಧ್ಯದಲ್ಲಿ ಚಿರಾಗ್ ಗೌಡ ಮೃತಪಟ್ಟಿದ್ದಾನೆ. ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸ್ವಗ್ರಾಮ ಡಿ. ಮಲ್ಲಿಗೆರೆಗೆ ಮೃತದೇಹ ತಂದು ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಪುತ್ರನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು.