ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀ ಮಾತಾ ವೈಷ್ಣೋದೇವಿ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಅರ್ಧಕುವರಿಯಲ್ಲಿರುವ ಇಂದರ್ಪ್ರಸ್ಥ ಭೋಜನಾಲಯದ ಬಳಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು 14 ಜನರು ಗಾಯಗೊಂಡಿದ್ದಾರೆ.
ಘಟನೆಯ ಸಮಯದಲ್ಲಿ, ಸುಮಾರು 12 ರಿಂದ 15 ಯಾತ್ರಿಕರು ಸ್ಥಳದಲ್ಲಿದ್ದರು. ಆರಂಭದಲ್ಲಿ ಎರಡು ಶವಗಳನ್ನು ಹೊರತೆಗೆಯಲಾಗಿದೆ. ಗಾಯಾಳುಗಳನ್ನು ಕತ್ರಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗಂಭೀರ ಗಾಯಗೊಂಡ ವ್ಯಕ್ತಿಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ. ಮಾನವಶಕ್ತಿ ಮತ್ತು ಯಂತ್ರೋಪಕರಣಗಳ ನಿಯೋಜನೆಯೊಂದಿಗೆ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಶ್ರೀ ಮಾತಾ ವೈಷ್ಣೋದೇವಿ ದೇಗುಲ ಮಂಡಳಿಯು ಪರಿಸ್ಥಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದೆ.
ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದ ಭೂಕುಸಿತ ಸಂಭವಿಸಿದ್ದು, ಯಾತ್ರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ದೇವಾಲಯ ಮಂಡಳಿಯು ವೈಷ್ಣೋದೇವಿ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಅಲ್ಲದೇ, ದುರ್ಬಲ ಪ್ರದೇಶಗಳಲ್ಲಿ ಪ್ರವಾಹ ಎಚ್ಚರಿಕೆ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಹಲವಾರು ಜಿಲ್ಲೆಗಳಿಗೆ ಭಾರತ ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ ಹೊರಡಿಸಲಾಗಿದೆ. ಈ ಭಾಗದಲ್ಲಿ ನದಿಗಳು ಅಪಾಯದ ಮಟ್ಟಕ್ಕಿಂತ ಹೆಚ್ಚು ಹರಿಯುತ್ತಿದ್ದು, ಮತ್ತಷ್ಟು ಭೂಕುಸಿತ ಮತ್ತು ಹಠಾತ್ ಪ್ರವಾಹದ ಭೀತಿ ಉಂಟಾಗಿದೆ.
A landslide incident has occurred near Inderprastha Bhojnalaya at Adhkwari, some injuries are feared. Rescue operations are underway along with required manpower and machinery.
— Shri Mata Vaishno Devi Shrine Board (@OfficialSMVDSB) August 26, 2025
Jai Mata Di#VaishnoDevi #YatraUpdate