ಮಧ್ಯಪ್ರದೇಶದಲ್ಲಿ ನಡೆದ ವರದಕ್ಷಿಣೆ ಸಂಬಂಧಿತ ದೌರ್ಜನ್ಯ ಪ್ರಕರಣದಲ್ಲಿ 23 ವರ್ಷದ ಮಹಿಳೆಯೊಬ್ಬಳನ್ನು ಆಕೆಯ ಪತಿ ಕಟ್ಟಿಹಾಕಿ, ಚಿತ್ರಹಿಂಸೆ ನೀಡಿದ್ದಾನೆ. ನೋವಿನಿಂದ ಕೂಗಿದಾಗ ಆಕೆಯ ಬಾಯಿಗೆ ಬಿಸಿ ಚಾಕು ಇಟ್ಟಿದ್ದಾನೆ.
ಖರ್ಗೋನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕುಡಿದ ಅಮಲಿನಲ್ಲಿದ್ದ ಪತಿ ಆಕೆಯ ದೇಹದ ಭಾಗ, ತೋಳುಗಳು ಮತ್ತು ಕಾಲುಗಳಿಗೆ ಬಿಸಿ ಚಾಕುವಿನಿಂದ ಸುಟ್ಟಿದ್ದಾನೆ. ಇದರಿಂದಾಗಿ ಮಹಿಳೆಗೆ ತೀವ್ರವಾದ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂತ್ರಸ್ತ ಮಹಿಳೆಯ ಪ್ರಕಾರ, ಈ ವರ್ಷದ ಫೆಬ್ರವರಿಯಲ್ಲಿ ಅವರ ಮದುವೆಯಾಗಿದ್ದು, ಗಂಡ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ. ಹಲ್ಲೆ ಮಾಡುತ್ತಿದ್ದ. ಅವಳು ತನಗೆ ಇಷ್ಟವಿಲ್ಲ ಎಂದು ಹೇಳಿದ್ದ. ಪದೇ ಪದೇ ನಿಂದನೆ, ಹಿಂಸೆ ಅನುಭವಿಸಿದ ನಂತರ ಮಹಿಳೆ ಖುಷ್ಬೂ ಪಿಪ್ಲಿಯಾ ಸೋಮವಾರ ಮುಂಜಾನೆ ಪಾರಾಗಿದ್ದಾಳೆ. ಮನೆಕೆಲಸದವರಿಂದ ಎರವಲು ಪಡೆದ ಮೊಬೈಲ್ ಫೋನ್ ಬಳಸಿ ತನ್ನ ಕುಟುಂಬಕ್ಕೆ ಮಾಹಿತಿ ನೀಡಿದ್ದು, ನಂತರ ಅವಳನ್ನು ಕರೆತಂದು ಚಿಕಿತ್ಸೆಗಾಗಿ ಅವರ್ಕಾಚ್‌ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಕ್ರೂರ ಹಲ್ಲೆ ಮಾಡಿದ ಪತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮಹಿಳೆ ಕುಟುಂಬ ಒತ್ತಾಯಿಸಿದೆ.
ಅಂಜಾರ್ ನಿವಾಸಿ ಖುಷ್ಬೂ ಎಂಬ ಮಹಿಳೆಯನ್ನು ಆಕೆಯ ಪತಿ ಬಿಸಿಯಾದ ಚಾಕುವಿನಿಂದ ತೀವ್ರವಾಗಿ ಸುಟ್ಟುಹಾಕಿದ್ದಾನೆ ಎಂದು ಆಸ್ಪತ್ರೆಯಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಆಸ್ಪತ್ರೆ ಬಂದ ಪೊಲೀಸರು ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ಮದುವೆಯ ನಂತರ ಆಕೆಯ ಪತಿ ಪದೇ ಪದೇ ಆಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಆಕೆಯನ್ನು ಮನೆಯಿಂದ ಹೊರಹೋಗುವಂತೆ ಬೆದರಿಕೆ ಹಾಕಿದ್ದ ಎಂದು ಗೊತ್ತಾಗಿದೆ. ಭಾನುವಾರ ರಾತ್ರಿ ಕುಡಿದ ಅಮಲಿನಲ್ಲಿ ಅವಳನ್ನು ಹೊಡೆದು ನಂತರ ಅಡುಗೆಮನೆಗೆ ಎಳೆದೊಯ್ದಿದ್ದಾನೆ. ಆಕೆಯ ಕೈಕಾಲುಗಳನ್ನು ಕಟ್ಟಿ, ಆಕೆಯ ತಲೆಗೆ ಬಂದೂಕಿನಂತಹ ವಸ್ತುವನ್ನು ಒತ್ತಿದ್ದಾನೆ. ನಂತರ ದೇಹದ ಭಾಗಗಳಿಗೆ ಬಿಸಿಮಾಡಿದ ಚಾಕುವಿನಿಂದ ಸುಟ್ಟಿದ್ದಾನೆ. ಈ ಸಮಯದಲ್ಲಿ ಇತರ ಕುಟುಂಬ ಸದಸ್ಯರು ಮನೆಯಲ್ಲಿದ್ದರು ಎನ್ನಲಾಗಿದೆ.
ಸೋಮವಾರ ಬೆಳಗಿನ ಜಾವ 4:30 ರ ಸುಮಾರಿಗೆ ಖುಷ್ಬೂ ಮನೆ ಕೆಲಸದ ಸಿಬ್ಬಂದಿಯಿಂದ ಮೊಬೈಲ್ ತೆಗೆದುಕೊಂಡು, ಆಕೆಯ ಕುಟುಂಬವನ್ನು ಸಂಪರ್ಕಿಸಿದರು. ನಂತರ ಆಕೆಯನ್ನು ಮನೆಗೆ ಕರೆತರಲಾಯಿತು ಎಂದು ಖುಷ್ಬೂ ಅವರ ತಂದೆ ಲೋಕೇಶ್ ವರ್ಮಾ ಹೇಳಿದ್ದಾರೆ. ಅವರು ಮೆಂಗಾವ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೆಲವು ವ್ಯಕ್ತಿಗಳು ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಮತ್ತು ತನ್ನ ಮಗಳಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ.