ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಘನ ತ್ಯಾಜ್ಯ ಸಂಗ್ರಹಣೆಯ ಆಟೋ, ಟಿಪ್ಪರ್ ವಾಹನಗಳ ಮಸ್ಟರಿಂಗ್ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಇನ್ಮುಂದೆ ಮನೆ ಮನೆ ಕಸ ಸಂಗ್ರಹಕ್ಕೆ ಬರುವ ವಾಹನಗಳ ಸಮಯದಲ್ಲಿ ಬದಲಾವಣೆಯಾಗಲಿದೆ. ಇಂದಿನಿಂದ ವಾಹನಗಳ ಸ್ಕ್ಯಾನಿಂಗ್ ಸಮಯ ಬೆಳಿಗ್ಗೆ 5:30ರಿಂದ 6:30ರವರೆಗೆ ನಿಗದಿಪಡಿಸಲಾಗಿದೆ.
ಬೆಂಗಳೂರು ನಗರದಲ್ಲಿ ಸ್ವಚ್ಛತಾ ಕಾರ್ಯಗಳ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ವಾರ್ಡ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಸ ಸಂಗ್ರಹದ ಆಟೋ, ಟಿಪ್ಪರ್ ವಾಹನಗಳ ಮಸ್ಟರಿಂಗ್ ಸಮಯ ಪರಿಷ್ಕರಿಸಲಾಗಿದೆ.
ಈ ಹಿಂದೆ ಬೆಳಿಗ್ಗೆ 6ರಿಂದ 7:30ರವರೆಗೆ ತ್ಯಾಜ್ಯ ಸಂಗ್ರಹಣೆ ಮಾಡಲಾಗುತ್ತಿತ್ತು. ಆದರೆ ಈಗ ಒಂದುಗಂಟೆ ಮುಂಚಿತವಾಗಿ 5:30ರಿಂದ 6:30ರವರೆಗೆ ತ್ಯಾಜ್ಯ ಸಂಗ್ರಹ ಮಡಲಾಗುತ್ತದೆ. ಇದರಿಂದ ಜನರ ದೈನಂದಿನ ಕಾರ್ಯವೈಖರಿಗಳ ಜೊತೆಗೆ ಹೊಂದುವಂತೆ ಕ್ರಮ ಕೈಗೊಳ್ಳಲಾಗಿದೆ. ಸಮಯ ಬದಲಾವಣೆಯಿಂದಾಗಿ ನಿವಾಸಿಗಳು ಕೆಲಸಕ್ಕೆ ಹೋಗುವ ಮೊದಲೇ ತ್ಯಾಜ್ಯ ಸಂಗ್ರಹ ಮಾಡಲು ಅನುಕೂಲ ಕಲ್ಪಿಸಿರುವುದರಿಂದ ಎಲ್ಲೆಂದರಲ್ಲಿ ಕಸ ಎಸೆಯುವುವುದೂ ತಪ್ಪಲಿದೆ. ಕಚೇರಿ ಕೆಲಸಗಳಿಗೆ ತೆರಳಿದ ಮೇಲೆ ತ್ಯಾಜ್ಯ ಸಂಗ್ರಹಕ್ಕೆ ಬರುತ್ತಿರುವುದರಿಂದ ಹಲವೆಡೆ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದರು. ಇನ್ಮುಂದೆ ಈ ಪರದಾಟ ತಪ್ಪುವ ಸಾಧ್ಯತೆ ಇದೆ.