ತುಮಕೂರು: ದೇವರಾಯನ ದುರ್ಗದಲ್ಲಿ ಅರ್ಚಕ ನಾಗಭೂಷಣಚಾರ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ನಂತರ ಅರ್ಚಕ ನಾಗಭೂಷಣಚಾರ್ ಕ್ಯಾತ್ಸಂದ್ರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇತಿಹಾಸ ಪ್ರಸಿದ್ಧ ದೇವರಾಯನದುರ್ಗ ಲಕ್ಷ್ಮಿ ನರಸಿಂಹ ದೇವಾಲಯದಲ್ಲಿ ಪ್ರಸಾದ ತಯಾರಿಕೆಗೆ ನೇಮಕವಾಗಿರುವ ನಾಗಭೂಷಣಚಾರ್ ಸಮೀಪದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಮಾಡುವಾಗ ಇಬ್ಬರು ಮಹಿಳೆಯರು ಮತ್ತು ಇಬ್ಬರು ಯುವಕರು ಮೆಟ್ಟಿಲ ಮೇಲೆ ಅವರನ್ನು ಥಳಿಸಿದ್ದಾರೆ.
ಶುಕ್ರವಾರ ನಡೆದ ಘಟನೆ ವಿಡಿಯೋ ವೈರಲ್ ಆಗಿದ್ದು, ಭಾನುವಾರ ಅರ್ಚಕ ನಾಗಭೂಷಣಚಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಹಣೆಗೆ ಕುಂಕುಮ ಇಟ್ಟಿದ್ದಕ್ಕೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಭಕ್ತರು ಥಳಿಸಿದ್ದಾರೆ ಎನ್ನಲಾಗಿದೆ.
ಆದರೆ ಪೂಜೆಯ ವೇಳೆ ಕೈ ತಾಕಿದ್ದಕ್ಕೆ ಹೊಡೆದಿದ್ದಾರೆಂದು ಅರ್ಚಕ ದೂರು ನೀಡಿದ್ದಾರೆ.
ನನ್ನ ಮೇಲಿನ ಹಲ್ಲೆ ಷಡ್ಯಂತ್ರ
ನನ್ನ ಮೇಲಿನ ಹಲ್ಲೆ ಷಡ್ಯಂತ್ರ ಎಂದು ಅರ್ಚಕ ನಾಗಭೂಷಣಚಾರ್ ತಿಳಿಸಿದ್ದಾರೆ. ಶುಕ್ರವಾರ 12 ಗಂಟೆ ಸುಮಾರಿಗೆ ದೇವಾಲಯದ ಕೆಲಸ ಕಾರ್ಯದಲ್ಲಿ ನಾನು ನಿರತನಾಗಿದ್ದೆ. ಆಗ ಓರ್ವ ಹುಡುಗ ಬಂದು ನಿಮಗೆ ಯಾರೋ ಕಾಯುತ್ತಿದ್ದಾರೆ ಎಂದು ಕರೆದ. ನಿಮ್ಮವರಿಗೆ ತೊಂದರೆ ಆಗಿದೆ ಬನ್ನಿ ಎಂದು ಕರೆದುಕೊಂಡು ಹೋದರು. ನಿರ್ಜನ ಸ್ಥಳಕ್ಕೆ ಕರೆದುಕೊಂಡು ಹೋಗಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ದೇವಾಲಯದಲ್ಲಿ ಮಹಾನ್ ನೈವೇದ್ಯ ನಡೆಯುವಾಗ ಸಾಕಷ್ಟು ಜನರಿದ್ದರು. ಇಲ್ಲಿ ಯಾರು ಇರಬಾರದು, ಹೊರಗೆ ಹೋಗಿ ಎಂದು ಹೇಳಿದ್ದೆ. ಅದಾದ ಬಳಿಕ ಹುಡುಗ ಬಂದು ಕರೆದೊಯ್ದು ಹಲ್ಲೆ ಮಾಡಿದ್ದಾರೆ. ದೇವಸ್ಥಾನಕ್ಕೆ ಯಾರು ಬರುತ್ತಾರೆ ಹೋಗುತ್ತಾರೆ ಎಂದು ಹೇಳಲು ಆಗುವುದಿಲ್ಲ. ದೇವಸ್ಥಾನದಲ್ಲಿದ್ದಾಗ ಮಹಿಳೆ ಜೊತೆ ಆ ರೀತಿ ಮಾಡಲು ಆಗುವುದಿಲ್ಲ. ಅವರು ಯಾಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಅವರಿಗೆ ಗೊತ್ತು. 20 ವರ್ಷದಿಂದ ದೇವಸ್ಥಾನದಲ್ಲಿ ಸೇವೆ ಮಾಡಿಕೊಂಡು ಬಂದಿದ್ದೇನೆ. ಈ ಘಟನೆ ನಡೆದ ಮರುದಿನದಿಂದ ನನ್ನ ಆರೋಗ್ಯ ಹದಗೆಟ್ಟಿದೆ. ಕ್ಯಾತ್ಸಂದ್ರ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದೇನೆ ತನಿಖೆ ಮಾಡಿ ನ್ಯಾಯ ಒದಗಿಸುತ್ತೇನೆ ಎಂದು ಪೊಲೀಸರು ಹೇಳಿದ್ದಾರೆ. ಯಾರಿಂದ ಹಲ್ಲೆಯಾಗಿದೆ ಎಂದು ನಾನು ಹೇಳುವುದಕ್ಕೆ ಆಗುವುದಿಲ್ಲ ಎಂದು ಅರ್ಚಕ ನಾಗಭೂಷಣಚಾರ್ ಹೇಳಿದ್ದಾರೆ.
