ಬೆಂಗಳೂರು: ವೈದ್ಯಕೀಯ ಕೋರ್ಸ್ ಆಕಾಂಕ್ಷಿಗಳಿಗೆ ಎರಡನೇ ಸುತ್ತಿಗೆ ಹೆಚ್ಚುವರಿಯಾಗಿ 400 ವೈದ್ಯಕೀಯ ಸೀಟುಗಳು ಸಿಗುವ ಸಾಧ್ಯತೆ ಇದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗ ಹೆಚ್ಚುವರಿ ಸೀಟುಗಳನ್ನು ಸೇರ್ಪಡೆ ಮಾಡಲು ಯೋಜಿಸಿದೆ. ಇದರಿಂದಾಗಿ ಎರಡನೇ ಸುತ್ತಿನ ಕೌನ್ಸೆಲಿಂಗ್ ವೇಳೆಗೆ ಸುಮಾರು 400 ಸೀಟುಗಳು ಲಭ್ಯವಾಗಲಿದ್ದು, ವೈದ್ಯಕೀಯ ಕೋರ್ಸ್ ಆಕಾಂಕ್ಷಿಗಳಿಗೆ ಅನುಕೂಲವಾಗಲಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗ ಮೆಡಿಕಲ್ ಕೌನ್ಸೆಲಿಂಗ್ ಕಮಿಟಿ ಹೆಚ್ಚುವರಿ ಸೀಟುಗಳನ್ನು ಮುಂದಿನ ಸುತ್ತಿನ ಕೌನ್ಸೆಲಿಂಗ್ ಗೆ ಸೇರಿಸಲು ಅನುಮತಿ ನೀಡಿದೆ. ಈಗಾಗಲೇ ರಾಜ್ಯದಲ್ಲಿ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣವಾಗಿದ್ದು, ಎರಡನೇ ಸುತ್ತಿನ ಸೀಟು ಹಂಚಿಕೆ ಬಾಕಿ ಇದೆ. ಆಗಸ್ಟ್ 29ರಂದು ಎರಡನೇ ಸುತ್ತಿನ ಕೌನ್ಸೆಲಿಂಗ್ ಹಂಚಿಕೆ ಫಲಿತಾಂಶ ಬಿಡುಗಡೆ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಾತ್ಕಾಲಿಕ ವೇಳಾಪಟ್ಟಿ ರಚಿಸಿದೆ.
ಈ ವರ್ಷ ಸೀಟುಗಳ ಸಂಖ್ಯೆ ಹೆಚ್ಚಳ ಮಾಡುವಂತೆ ಮೆಡಿಕಲ್ ಕಾಲೇಜುಗಳು ಪ್ರಸ್ತಾವನೆ ಸಲ್ಲಿಸಿದ್ದರೂ ರಾಷ್ಟ್ರೀಯ ವೈದ್ಯಕೀಯ ಆಯೋಗ ಪರಿಗಣಿಸಿರಲಿಲ್ಲ. ಈಗ ಎಂಬಿಬಿಎಸ್ ಸೀಟುಗಳನ್ನು ಹೆಚ್ಚಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಘೋಷಿಸಿದ್ದು, ಪ್ರಸ್ತಾವನೆ ಸಲ್ಲಿಸಿದ ಸೀಟುಗಳ ಪೈಕಿ ಶೇಕಡ 50ರಷ್ಟು ಸೀಟು ಹೆಚ್ಚುವರಿಯಾಗಿ ದೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.