ಬಳ್ಳಾರಿ: ಸೆಪ್ಟಂಬರ್ 22ರಂದು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಸಾಹಿತಿ ಬಾನು ಮುಷ್ತಾಕ್ ಉದ್ಘಾಟಿಸಲಿದ್ದು ಪ್ರತಾಪ್ ಸಿಂಹ ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಚಿವ ಸಂತೋಷ್ ಲಾಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ ಜಿಲ್ಲೆ, ಸಂಡೂರಿನಲ್ಲಿ ಮಾತನಾಡಿದ ಸಂತೋಷ್ ಲಾಡ್ ಅವರು, ಬಾನು ಮುಸ್ತಾಕ್ ಅವರನ್ನು ಕರೆಯಬಾರದೆಂದು ಸಂವಿಧಾನದಲ್ಲಿ ಇದೆಯೇ? ಎಲ್ಲದಕ್ಕೂ ವಿರೋಧ ಮಾಡುತ್ತಾ ಹೋದರೆ ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
2.5 ಲಕ್ಷ ಕೋಟಿ ಕೊಟ್ಟ ಉದ್ಯಮಿ ಅಜೀಮ್ ಪ್ರೇಂ ಜಿ ಅವರು ಯಾವ ಸಮುದಾಯದವರು? ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿದ್ದರು. ನಾವು ವಿರೋಧ ಮಾಡಿದ್ವಾ? ವಿರೋಧ ಮಾಡಿದವರು ಅವತ್ತು ಕೇಕ್ ತಿನ್ನಲು ಯಾಕೆ ಪಾಕಿಸ್ತಾನಕ್ಕೆ ಹೋದ್ರಿ? ಎಂದು ಸಂಡೂರಿನಲ್ಲಿ ಪ್ರತಾಪ್ ಸಿಂಹ ವಿರುದ್ಧ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದ್ದಾರೆ.
ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ದ್ವಂದ್ವ ನಿಲುವು ಪ್ರದರ್ಶಿಸುತ್ತಿದೆ. ಮೊದಲು ಎಸ್ಐಟಿ ರಚನೆ ಮಾಡಿದ್ದನ್ನು ಸ್ವಾಗತಿಸಿದ್ದರು. ಈಗ ಧಾರ್ಮಿಕ ಸ್ಥಳಕ್ಕೆ ಅಪಮಾನ ಎಂದು ಆರೋಪ ಮಾಡುತ್ತಿದ್ದಾರೆ. ಕಾನೂನಾತ್ಮಕವಾಗಿ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿದೆ. ಅಸ್ಥಿಪಂಜರ ಸಿಗದಿದ್ದಾಗ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಿದರು. ಅಸ್ಥಿಪಂಜರ ಸಿಕ್ಕಿದ್ದರೆ ಬಿಜೆಪಿಯವರು ಏನು ಮಾಡುತ್ತಿದ್ದರು? ಅಸ್ಥಿಪಂಜರ ಸಿಕ್ಕಿಲ್ಲ. ಅದರ ಬಗ್ಗೆ ಮಾತನಾಡುವುದಿಲ್ಲ, ಷಡ್ಯಂತ್ರ ಇರುವುದಕ್ಕೆ ತನಿಖೆ ಮಾಡಲಾಯಿತು ಎಂದು ಸಂತೋಷ್ ಲಾಡ್ ಹೇಳಿದ್ದಾರೆ.