ಕಾರವಾರ: ತರಕಾರಿ ವ್ಯಾಪಾರಿಯನ್ನು ಹೆದರಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಮೂವರು ಯುವಕರನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪೊಲೀಸರು ಬಂಧಿಸಿದ್ದಾರೆ.
ಭಟ್ಟಗಾಂವ್ ಬಳಿಯ ನಿವಾಸಿ ತರಕಾರಿ ವ್ಯಾಪಾರಿಯೊಬ್ಬರಿಗೆ ಮೂವರು ಯುವಕರು, ಕರೆ ಮಾಡಿ ನಿನ್ನ ಮಗಳ ಖಾಸಗಿ ವಿಡಿಯೋ, ಫೋಟೋ ನಮ್ಮ ಬಳಿ ಇದೆ. ತಕ್ಷಣ 20 ಲಕ್ಷ ಹಣ ಕೊಡಬೇಕು. ಇಲ್ಲವಾದರೆ ವಿಡಿಯೋ, ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಇದಾದ ಬಳಿಕ ಆಗಸ್ಟ್ 18 ಹಾಗೂ 19ರಂದು ವ್ಯಾಪಾರಿಯ ಪತ್ನಿಯ ಮೊಬೈಲ್ ಗೆ ಕರೆ ಮಾಡಿ 15 ಲಕ್ಷ ಹಣವಾದರೂ ಕೊಡಬೇಕು. ಇಲ್ಲವಾದಲ್ಲಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಈ ಬಗ್ಗೆ ದಂಪತಿ ಪೊಲೀಸರಿಗೆ ದೂರು ನೀಡಿದ್ದರು. ಪಿಎಸ್ ಐ ನವೀನ್ ನಾಯ್ಕ್ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿತ್ತು. ಸದ್ಯ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮೊಹಮ್ಮದ್ ಫಾರಿಸ್, ಮೊಹಮ್ಮದ್ ಅರ್ಶದ್, ಅಮನ್ ಎಂದು ಗುರುತಿಸಲಾಗಿದೆ. ಅಮನ್ ಇಂಜಿನಿಯರಿಂಗ್ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಸದ್ಯ ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಗಿದೆ.