ಮುಂಬೈ: ಮುಂಬೈನ ಕಿಂಗ್ಸ್ ಸರ್ಕಲ್ ನಲ್ಲಿ ಸಾರ್ವಜನಿಕ ಗಣೇಶೋತ್ಸವ ಅಂಗವಾಗಿ ಜಿ.ಎಸ್.ಬಿ. ಸೇವಾ ಮಂಡಲ ಪ್ರತಿಷ್ಠಾಪಿಸುವ ಗಣಪತಿ ದೇಶದ ಶ್ರೀಮಂತ ಗಣೇಶ ಮೂರ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಗಣೇಶ ಮೂರ್ತಿಗೆ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯಿಂದ 474.46 ಕೋಟಿ ರೂಪಾಯಿ ಮೊತ್ತದ ವಿಮೆ ಮಾಡಿಸಲಾಗಿದೆ. ಕಳೆದ ವರ್ಷ 400.58 ಕೋಟಿ ರೂಪಾಯಿ ಮೊತ್ತದ ವಿಮೆ ಮಾಡಿಸಲಾಗಿತ್ತು. 474.46 ಕೋಟಿ ರೂಪಾಯಿ ಮೊತ್ತದ ವಿಮೆಗೆ ಜಿ.ಎಸ್.ಬಿ. ಸೇವಾ ಮಂಡಲ ವಿಮೆ ಕಂತು ಪಾವತಿಸಿದೆ.
ಈ ಶ್ರೀಮಂತ ಮೂರ್ತಿ ಗಣೇಶ ಮೂರ್ತಿ ಅಲಂಕಾರಕ್ಕೆ 69 ಕೆಜಿ ಚಿನ್ನಾಭರಣ, 336 ಕೆಜಿ ಬೆಳ್ಳಿ ಆಭರಣ ಬಳಕೆ ಮಾಡಲಾಗುವುದು. ಈ ಆಭರಣಗಳಿಗೆ ಹಾನಿಯಾದರೆ, ಕಳವಾದರೆ 67.03 ಕೋಟಿ ರೂಪಾಯಿ ಸಿಗಲಿದೆ. ವೇದಿಕೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದಲ್ಲಿ ಎರಡು ಕೋಟಿಯಷ್ಟು ಪರಿಹಾರ ದೊರೆಯಲಿದೆ. ಗಣೇಶೋತ್ಸವ ನಡೆಯುವ ಮೈದಾನ, ಪೆಂಡಾಲ್ ದರ್ಶನಕ್ಕೆ ಬರುವ ಭಕ್ತರಿಗೆ 30 ಕೋಟಿ ರೂಪಾಯಿ ಮೊತ್ತದ ವಿಮೆ ಮಾಡಿಸಲಾಗಿದೆ. ಸ್ವಯಂಸೇವಕರು, ಭದ್ರತಾ ಸಿಬ್ಬಂದಿ, ಇತರೆ ಕೆಲಸಗಾರರಿಗೆ ಅಪಘಾತ, ಜೀವಹಾನಿಯಾದರೆ 375 ಕೋಟಿ ರೂಪಾಯಿ ಮೊತ್ತದ ವಿಮೆ ಪರಿಹಾರ ಸಿಗಲಿದೆ.
ಜಿ.ಎಸ್.ಬಿ. ಗಣೇಶೋತ್ಸವದಲ್ಲಿ ದಿನದ 24 ಗಂಟೆಯೂ ಪೂಜೆ, ಅರ್ಚನೆ, ಸೇವೆ, ಅನ್ನದಾನ ಇರುತ್ತದೆ. ಸಮಾಜದ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಸೇರಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.