ಬೆಂಗಳೂರು: ಗೌರಿ -ಗಣಪತಿ ಹಬ್ಬ, ಈದ್ ಮಿಲಾದ್ ಮೆರವಣಿಗೆ, ಸಾರ್ವಜನಿಕ ಸಮಾರಂಭಗಳಲ್ಲಿ ಡಿಸ್ಕ್ ಜಾಕಿ(ಡಿಜೆ) ಸೌಂಡ್ ಸಿಸ್ಟಮ್ ಬಳಕೆ ನಿಷೇಧಿಸಿ ಬೆಂಗಳೂರು ಪೊಲೀಸರು ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘಟನೆ ಪದಾಧಿಕಾರಿ ಚಾಮರಾಜಪೇಟೆ ಶಂಕರ್ ಅವರು ಪೊಲೀಸರ ಸುತ್ತೋಲೆ ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ಪೀಠದಲ್ಲಿ ಶನಿವಾರ ಅರ್ಜಿ ವಿಚಾರಣೆ ನಡೆಸಲಾಗಿದೆ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಸೌಂಡ್ ಸಿಸ್ಟಮ್ ಮತ್ತು ಡಿಜೆ ನಿರ್ಬಂಧಿಸಿ ಬೆಂಗಳೂರು ಪೊಲೀಸರು ಹೊರಡಿಸಿದ ಸುತ್ತೋಲೆಯಲ್ಲಿ ಯಾವುದೇ ಲೋಪಗಳಿಲ್ಲ. ವಸತಿ ಪ್ರದೇಶದಲ್ಲಿ ಹಗಲು ವೇಳೆ 55 ಡೆಸಿಬಲ್, ರಾತ್ರಿ ವೇಳೆ 45 ಡೆಸಿಬಲ್ ಶಬ್ದದ ಮಟ್ಟ ನಿಗದಿಪಡಿಸಲಾಗಿದೆ. ಹಾಗಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಹೆಚ್ಚು ಸದ್ದು ಮಾಡುವ ಡಿಜೆ ಸೌಂಡ್ ಸಿಸ್ಟಮ್ ಬಳಕೆಯನ್ನು ಒಪ್ಪಿಕೊಳ್ಳುವುದು ಕಷ್ಟ ಎಂದು ನ್ಯಾಯಪೀಠ ಹೇಳಿದೆ.
ಸೌಂಡ್ ಸಿಸ್ಟಮ್ ಉಪಕರಣಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಅವಕಾಶವಿದೆ. ಅವುಗಳ ಬಳಕೆಯನ್ನು ನಿರ್ಬಂಧಿಸುವುದು ಸರಿಯಾದ ಕ್ರಮವಲ್ಲ. ಶಬ್ದ ಮಾಲಿನ್ಯ ನಿಯಮಗಳಿಗೆ ಅನುಗುಣವಾಗಿ ಅಧಿಕಾರಿಗಳು ಮಾರ್ಗಸೂಚಿ ಹೊರಡಿಸಬೇಕಿತ್ತು. ಅದರ ಬದಲು ಸಾರ್ವತ್ರಿಕವಾಗಿ ಸುತ್ತೋಲೆ ಹೊರಡಿಸಿರುವುದು ಮೂಲಭೂತ ಹಕ್ಕಿನ ಉಲ್ಲಂಘನೆ ಆಗುತ್ತದೆ ಎಂದು ಅರ್ಜಿದಾರರು ಡಿಜೆ ನಿಷೇಧ ಆದೇಶವನ್ನು ಪ್ರಶ್ನಿಸಿದ್ದರು.