ಬೆಂಗಳೂರು: ರಾಜ್ಯದ ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ, ಏಕಲವ್ಯ ವಸತಿ ಶಾಲೆಗಳಲ್ಲಿ ಹಲವು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ನೇಮಕಾತಿ ವೇಳೆ ಕೃಪಾಂಕ ನೀಡಲು ಸುಪ್ರೀಂಕೋರ್ಟ್ ಸಮ್ಮತಿಸಿದೆ.
ಇದರೊಂದಿಗೆ ಕಳೆದ 14 ವರ್ಷದಿಂದ ಶಿಕ್ಷಕರು ನಡೆಸುತ್ತಿದ್ದ ಕಾನೂನು ಹೋರಾಟ ತಾರ್ಕಿಕ ಅಂತ್ಯ ಕಂಡಿದೆ. ಜಾತಕಪಕ್ಷಿಗಳಂತೆ ಕಾಯುತ್ತಿದ್ದವರಿಗೆ ಕೊನೆಗೂ ನ್ಯಾಯ ಸಿಕ್ಕಿದೆ. ಗುತ್ತಿಗೆ ಶಿಕ್ಷಕರಿಗೆ ಶೇಕಡ 50 ಕೃಪಾಂಕ ನೀಡಲೇಬೇಕೆಂಬ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.
2011ರಲ್ಲಿ ವೃಂದ ಮತ್ತು ನೇಮಕ ನಿಯಮ ಜಾರಿಗೆ ಬಂದಾಗ ಕಾರ್ಯನಿರ್ವಹಿಸುತ್ತಿದ್ದ ಗುತ್ತಿಗೆ ಶಿಕ್ಷಕರಿಗೆ ಇದು ಅನ್ವಯವಾಗಲಿದೆ ಎಂದು ಹೇಳಲಾಗಿದೆ.
ವಸತಿ ಶಾಲೆಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳು ಸಂಘಕ್ಕೆ ಭಾರಿ ಹಿನ್ನಡೆಯಾಗಿದೆ. ಈಗ ಕೃಪಾಂಕ ಆಧರಿಸಿ ಅರ್ಹರಿಗೆ ನೇಮಕಾತಿ ಪತ್ರ ನೀಡಲೇಬೇಕಾದ ಅನಿವಾರ್ಯತೆಗೆ ಎದುರಾಗಿದೆ. ಹೈಕೋರ್ಟ್ ಏಕಸದಸ್ಯ ಪೀಠ ಮತ್ತು ವಿಭಾಗೀಯ ಪೀಠಗಳು ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಶೇಕಡ 5ರಷ್ಟು ಕೃಪಾಂಕ ನೀಡಲೇಬೇಕೆಂದು ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಸರ್ಕಾರಕ್ಕೆ ಕೃಪಾಂಕ ನೀಡಿದ ಹೊರತು ಬೇರೆ ಮಾರ್ಗ ಇಲ್ಲವಾಗಿದೆ ಎನ್ನಲಾಗಿದೆ.