BREAKING: ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೆಸರಲ್ಲಿ ಸರ್ಕಾರಿ ನೌಕರರಿಗೆ ವಂಚನೆ: ಆರೋಪಿ ಅರೆಸ್ಟ್

ಶಿವಮೊಗ್ಗ: ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರಿ ನೌಕರರಿಗೆ ವರ್ಗಾವಣೆ ಮಾಡಿಸಿಕೊಡುವುದಾಗಿ ವಂಚಿಸುತ್ತಿದ್ದ ಆರೋಪಿಯನ್ನು ಶಿವಮೊಗ್ಗದ ಜಯನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ರಘುನಾಥ್ ಎಂದು ಗುರುತಿಸಲಾಗಿದೆ. ಕಳೆದ ಆರು ತಿಂಗಳಿಂದ ರಘುನಾಥ್ ತಾನು ಸಚಿವ ಮಧು ಬಂಗಾರಪ್ಪ ಅವರ ಆಪ್ತ ಸಹಾಯಕ(ಪಿ.ಎ.) ಎಂದು ಹೇಳಿಕೊಂಡು ಸರ್ಕಾರಿ ನೌಕರರಿಗೆ ವರ್ಗಾವಣೆ ಹಾಗೂ ಸಾರ್ವಜನಿಕರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

ಈತ ಕಾಂಗ್ರೆಸ್‌ನ ಎನ್.ಎಸ್.ಯು.ಐ. ಮುಖಂಡ ಎಂದು ಹೇಳಿಕೊಂಡಿದ್ದಾನೆ. ಪಕ್ಷದ ಮೂಲಗಳ ಪ್ರಕಾರ ಈತ ಕಾಂಗ್ರೆಸ್ ಕಾರ್ಯಕರ್ತನಲ್ಲ ಎಂದು ತಿಳಿದುಬಂದಿದೆ. ಈತನ ಬಗ್ಗೆ ಮೊದಲು ಸಚಿವರ ವಿಶೇಷ ಅಧಿಕಾರಿ ಶ್ರೀಪತಿ ಅವರಿಗೆ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಅವರು ವಿಚಾರಿಸುತ್ತಿರುವಾಗಲೇ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಭಾರತಿಯವರಿಗೆ ಆರೋಪಿ ಕರೆ ಮಾಡಿ ನಿಮಗೆ ವರ್ಗಾವಣೆಯಾಗಿದ್ದು ಪ್ಲೇಸ್ ತೋರಿಸಿಲ್ಲ. ಈ ಬಗ್ಗೆ ಸಚಿವರ ಜೊತೆ ಮಾತನಾಡಿ ನಾನು ನಿಮ್ಮ ಕೆಲಸ ಮಾಡಿಕೊಡುವುದಾಗಿ ಹೇಳಿದ್ದ. ಆದರೆ ಅಧಿಕಾರಿ ಅನುಮಾನಗೊಂಡು ಶ್ರೀಪತಿಯವರಿಗೆ ತಿಳಿಸಿದ್ದಾರೆ. ಅಲ್ಲದೆ ಭಾರತಿ ಅವರು ಆರೋಪಿಯ ಮೊಬೈಲ್ ಸಂಖ್ಯೆಯನ್ನು ‘ಟೂಕಾಲ‌ರ್’ನಲ್ಲಿ ಪರಿಶೀಲಿಸಿದ್ದಾರೆ. ಬಳಿಕ ಈ ರಘುನಾಥ್ ಸಚಿವರ ಪಿಎ. ಅಲ್ಲ ಎಂಬುದು ಸ್ಪಷ್ಟವಾಗುತ್ತಿದ್ದಂತೆ ಕಾಂಗ್ರೆಸ್ ಮುಖಂಡ ಗಿರೀಶ್ ಅವರ ಮೂಲಕ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಈ ದೂರಿನ ಆಧಾರದ ಮೇಲೆ ಪೊಲೀಸರು ರಘುನಾಥ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read