ಶಿವಮೊಗ್ಗ: ಕೆಲ ದಿನಗಳ ಹಿಂದೆ ಶಿವಮೊಗ್ಗ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ನ ಶೌಚಾಲಯದಲ್ಲಿ ನವಜಾತ ಗಂಡು ಮಗುವಿನ ಶವ ಪತ್ತೆಯಾಗಿತ್ತು. ಇದೀಗ ಈ ಪ್ರಕರಣಕ್ಕೆ ಆಘಾತಕಾರಿ ಟ್ವಿಸ್ಟ್ ಸಿಕ್ಕಿದೆ.
ಹೆತ್ತ ತಾಯಿಯೇ ಒಂದು ದಿನದ ಮಗುವನ್ನು ಕೊಲೆಗೈದು ಕಥೆಕಟ್ಟಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ತಿಮ್ಲಾಪುರ ಗ್ರಾಮದ ಶೈಲಾ ಎಂಬ ಮಹಿಳೆ ತನ್ನ ಮಗುವನ್ನೇ ಕೊಲೆಗೈದ ಆರೋಪಿ.
ದೊಡ್ಡಪೇಟೆ ಪೊಲೀಸರು ಶಿವಮೊಗ್ಗ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶೈಲಾ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾಳೆ. ಶೈಲಾಳಿಗೆ ಈಗಗಲೇ ಎತ್ರಡು ಮಕ್ಕಳು ಇದ್ದರು. ಅಲ್ಲದೇ ನಾಲ್ಕು ವರ್ಷಗಳ ಹಿಂದೆ ಸಂತಾನಹರಣ ಶಸ್ತ್ರಚಿಕಿತ್ಸೆಯೂ ಆಗಿತ್ತು. ಆದರೂ ಶೈಲಾ ಗರ್ಭಿಣಿಯಾಗಿದ್ದಳು. ಈ ವಿಚಾರವನ್ನು ಕುಟುಂಬದವರಿಗೆ ತಿಳಿಸಿರಲಿಲ್ಲ. ತನಗೆ ಥೈರಾಯ್ಡ್ ಇದೆ ಎಂದು ಹೇಳಿ ಆಗಾಗ ಆಸ್ಪತ್ರೆಗೆ ಹೋಗಿ ಬರುತ್ತಿದ್ದಳು. ಇದನ್ನೇ ನೆಪ ಮಾಡಿಕೊಂಡು ಗರ್ಭಿಣಿಯಾಗಿರುವ ವಿಷಯವನ್ನೂ ಮನೆಯಲ್ಲಿ ತಿಳಿಸಿರಲಿಲ್ಲ.
ಆಗಸ್ಟ್ 16ರಂದು ಶೈಲಾ ನಾದಿನಿ ಶಿವಮೊಗ್ಗಾ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದರು. ಆಕೆಯನ್ನು ನೋಡಲೆಂದು ಬಂದ ಶೈಲಾಳಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೊಟ್ಟೆ ನೋವು ಎಂದು ಶೈಲಾ ಆಸ್ಪತ್ರೆಗೆ ದಾಖಲಾಗಿದ್ದಳು. ಕೆಲ ಸಮಯದ ಬಳಿಕ ಶೌಚಾಲಯಕ್ಕೆ ಹೋಗಿದ್ದ ಶೈಲಾ ನಾರ್ಮಲ್ ಡೆಲಿವರಿ ಆಗಿದ್ದಾಳೆ. ಶೌಚಾಲಯದಲ್ಲಿ ಶಸ್ತ್ರಚಿಕಿತ್ಸೆಗೆ ಬಳಸುವ ಬ್ಲೇಡ್ ನಿಂದ ಶಿಶುವಿನ ಕತ್ತು ಕೊಯ್ದು ಹತ್ಯೆಗೈದಿದ್ದಾಳೆ. ಬಳಿಕ ಏನೂ ಆಗದವರಂತೆ ಬಂದು ವಾರ್ಡ್ ನಲ್ಲಿ ಚಿಕಿತ್ಸೆ ಪಡೆದಿದ್ದಾಳೆ. ಶೌಚಾಲಯದಲ್ಲಿ ಶಿಶುವಿನ ಮೃತದೇಹ ಪತ್ತೆಯಾಗುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿಗಳು ಪೊಲೀಸರಿಗೆ ದೂರು ನೀಡಿದ್ದರು.
ಆಸ್ಪತ್ರೆಗೆ ಬಂದ ಪೊಲೀಸರಿಗೆ ಶೈಲಾ ಹಾಗೂ ಆಕೆಯ ಪತಿ ಮೇಲೆ ಅನುಮಾನವಿತ್ತು. ಪ್ರಶ್ನಿಸಿದಾಗ ಮಗು ನಮ್ಮದಲ್ಲ ಎಂದಿದ್ದಾರೆ. ಚಿಕಿತ್ಸೆ ಬಳಿಕ ಶೈಲಾ ಊರಿಗೆ ತೆರಳಿದ್ದಾಳೆ. ತನಿಖೆ ಚುರುಕುಗೊಳಿಸಿದ ಪೊಲೀಸರು ಶೈಲಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿಷಯ ಬಾಯ್ಬಿಟ್ಟಿದ್ದಾಳೆ. ಸದ್ಯ ಶೈಲಾಳನ್ನು ದೊಡ್ದಪೇಟೆ ಪೊಲೀಸರು ಬಂಧಿಸಿದ್ದಾರೆ.