ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಕಾವೇರಿ ಕುಡಿಯುವ ನೀರು, ಮೇಲ್ಸೇತುವೆಗಳು, ಪೆರಿಫೆರಲ್ ರಿಂಗ್ ರಸ್ತೆ, ಮೆಟ್ರೋ ಮಾರ್ಗ, ಸುರಂಗ ರಸ್ತೆ, ಬಫರ್ ರಸ್ತೆಗಳು, ಮಳೆನೀರುಗಾಲುವೆಗಳ ಅಭಿವೃದ್ಧಿ, ಬ್ಲಾಕ್ ಟಾಪಿಂಗ್, ವೈಟ್ ಟಾಪಿಂಗ್ ಸೇರಿದಂತೆ ಇನ್ನು ಹಲವು ಯೋಜನೆಗಳ ವಿವರವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಸದನದಲ್ಲಿ ವಿವರಿಸಿದರು.
ನಗರದಲ್ಲಿ ರಸ್ತೆ ಗುಂಡಿ ಸಮಸ್ಯೆ ಬಗೆಹರಿಸಲು ಎಲ್ಲೆಲ್ಲಿ ಗುಂಡಿಗಳಿವೆ ಎಂದು ಸಾರ್ವಜನಿಕರು ಕೂಡ ಅಧಿಕಾರಿಗಳ ಗಮನಕ್ಕೆ ತರಲು ಅಕಾಶ ಕಲ್ಪಿಸಿದ್ದೇವೆ. ‘ಗುಂಡಿ ಗಮನ’ ಯೋಜನೆ ತಂದು ಎಲ್ಲೆಲ್ಲಿ ರಸ್ತೆಗುಂಡಿಗಳಿವೆಯೋ ಅವುಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಪೊಲೀಸರು ಕೂಡ ರಸ್ತೆಗುಂಡಿಗಳ ಪಟ್ಟಿ ಮಾಡುವ ಅವಕಾಶ ಕಲ್ಪಿಸಿದ್ದೇವೆ. ಸುಮಾರು 10 ಸಾವಿರ ಗುಂಡಿಗಳನ್ನು ಗುರುತಿಸಲಾಗಿದ್ದು. ಇದರಲ್ಲಿ ಸುಮಾರು 5,377 ಗುಂಡಿಗಳನ್ನು ಮುಚ್ಚಲಾಗಿದೆ. ಉಳಿದ 5 ಸಾವಿರ ಗುಂಡಿಗಳನ್ನು ಮುಚ್ಚಲು ಕಾರ್ಯಕ್ರಮ ರೂಪಿಸಿದ್ದೇವೆ ಎಂದರು.
ನಗರದಲ್ಲಿ 154 ಕಿಮೀ ನಷ್ಟು ವೈಟ್ ಟಾಪಿಂಗ್ ಕಾಮಗಾರಿಯನ್ನು ರೂ. 1,700 ಕೋಟಿ ವೆಚ್ಚದಲ್ಲಿ ಮಾಡುತ್ತಿದ್ದೇವೆ. ಈ ರಸ್ತೆಗಳು 30 ವರ್ಷಗಳ ಕಾಲ ಬಾಳಿಕೆ ಬರುತ್ತವೆ. ಉಪರಸ್ತೆಗಳನ್ನು ಸಹ ವೈಟ್ ಟಾಪಿಂಗ್ ಯೋಜನೆಯಡಿ ಕೈಗೆತ್ತಿಕೊಳ್ಳಲಾಗುವುದು. ಮೊದಲ ಹಂತದಲ್ಲಿ 632 ಕಿ.ಮೀ ಕೈಗೆತ್ತಿಕೊಳ್ಳಲಾಗುತ್ತಿದ್ದು, ಇದಕ್ಕೆ 7,500 ಕೋಟಿ ಖರ್ಚು ಮಾಡಲಾಗುತ್ತಿದೆ. ಒಟ್ಟಾರೆಯಾಗಿ ರಸ್ತೆಗಳ ಅಭಿವೃದ್ಧಿ ಹಾಗೂ ವೈಟ್ ಟಾಪಿಂಗ್ ಗೆ ಸುಮಾರು 9 ಸಾವಿರ ಕೋಟಿ ವ್ಯಯಿಸಲು ಯೋಜನೆ ರೂಪಿಸಲಾಗಿದೆ. 450 ಕಿ.ಮೀ ಉದ್ದದ ಪ್ರಮುಖ ಹಾಗೂ ಉಪ ರಸ್ತೆಗಳಿಗೆ ಬ್ಲಾಕ್ ಟಾಪಿಂಗ್ ಮಾಡಲು 699 ಕೋಟಿಯ ಯೋಜನೆ ರೂಪಿಸಲಾಗಿದೆ. ಎಲ್ ಇಡಿ ಲೈಟ್ ಗಳನ್ನು ಅಳವಡಿಸಲು 4 ಪ್ಯಾಕೇಜ್ ಗಳಾಗಿ ರೂ. 180 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದ್ದು, ಕೆಲಸ ಪ್ರಾರಂಭವಾಗಿದೆ. ಜನರು ಸಹ ನಗರದಲ್ಲಿ ಎಲ್ಲೆ ರಸ್ತೆಗುಂಡಿ ಕಂಡು ಬಂದರೂ ಫೋಟೊ ತೆಗೆದು ಪಾಲಿಕೆಯ ನಿಗದಿತ ದೂರವಾಣಿ ಸಂಖ್ಯೆಗೆ ಕಳುಹಿಸಬಹುದು ಎಂದು ಹೇಳಿದರು.
ರಾಜಕಾಲುವೆಗಳ ಪಕ್ಕ 300 ಕಿಮೀ ಉದ್ದಕ್ಕೆ ರಸ್ತೆ ನಿರ್ಮಾಣ ಮಾಡಲು 3 ಸಾವಿರ ಕೋಟಿ ರೂಪಾಯಿಯಲ್ಲಿ ಯೋಜನೆ ರೂಪಿಸಲಾಗಿದೆ. ಡಬಲ್ ಡೆಕ್ಕರ್ ಯೋಜನೆಗೆ ಪ್ರತಿ ಕಿಮೀಗೆ 120 ಕೋಟಿ ವೆಚ್ಚವಾಗುತ್ತಿದ್ದು 9 ಸಾವಿರ ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಒಟ್ಟು 44 ಕಿಮೀ ಉದ್ದ ಡಬಲ್ ಡೆಕ್ಕರ್ ನಿರ್ಮಾಣ ಮಾಡಲಾಗುವುದು. ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ 109 ಕೋಟಿ ಜಾಗ ಗುರುತಿಸಲಾಗಿದೆ. ಇದಕ್ಕೆ 15 ಸಾವಿರ ಕೋಟಿ ವೆಚ್ಚ ಮಾಡಲಾಗುವುದು ಎಂದರು.