ಶಿವಮೊಗ್ಗ: ಹಿಂದಿನ ಸರ್ಕಾರಕ್ಕಿಂತ ಈಗಿನ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಹೇಳಿದ್ದಾರೆ.
ಅವರು ನಗರದ ಅಗಮುಡಿ ಕನ್ವೇಷನ್ ಹಾಲ್ನಲ್ಲಿ ನೀರಾವರಿ ನಿಗಮ ನಿಯಮಿತ, ತುಂಗಾ ಮೇಲ್ದಂಡೆ ಮತ್ತು ಭದ್ರಾ ಗುತ್ತಿಗೆದಾರರ ಹೋರಾಟ ಸಮಿತಿ, ಶಿವಮೊಗ್ಗವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆಯನ್ನು ಸ್ವೀಕರಿಸಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ 9 ಇಲಾಖೆಗಳಿಂದ ಗುತ್ತಿಗೆದಾರರಿಗೆ 32 ಸಾವಿರ ಕೋಟಿಗೂ ಹೆಚ್ಚು ಹಣ ಕಳೆದ ಎರಡು-ಮೂರು ವರ್ಷಗಳಿಂದ ಬಾಕಿಯಿದೆ. ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ. ಯಾರಿಗೂ ಪೇಮೆಂಟ್ ಆಗುತ್ತಿಲ್ಲ. 20 ಪರ್ಸೆಂಟ್ ಕಮೀಷನ್ ನೀಡಿದ ಕೆಲವರಿಗೆ ಬಿಲ್ಗಳು ಆಗುತ್ತಾ ಇದೆ. ಈ ಬಗ್ಗೆ ಸಂಬಂಧಪಟ್ಟ ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ಈಗಾಗಲೇ ಹಲವು ಬಾರಿ ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಗುತ್ತಿಗೆದಾರರಿಂದಲೇ ಈ ಸರ್ಕಾರ ಬಂದಿದೆ ಎಂದು ಮನಸ್ಟಲ್ಲಿಟ್ಟುಕೊಂಡು ಕೂಡಲೇ ಅವರು ಎಲ್ಲಾ ಬಿಲ್ ಗಳನ್ನು ಕ್ಲಿಯರ್ ಮಾಡಬೇಕಿದೆ. ಯಾಕೆಂದರೆ ಹಿಂದಿನ ಅಧ್ಯಕ್ಷರಾದ ಕೆಂಪಣ್ಣನವರು ಮಾಡಿದ ಆರೋಪದಿಂದಲೇ ಈಗಿನ ಸರ್ಕಾರಕ್ಕೆ ಅಧಿಕಾರ ಸಿಕ್ಕಿತ್ತು. ನಾವು ಯಾವ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡುವುದಿಲ್ಲ. ಟೈಮ್ ಬಾಂಡ್ ಆಗಿ ಕೆಲವು ಯೋಜನೆಗಳಿರುತ್ತವೆ. ಕೆಲವೊಂದು ಸಂದರ್ಭದಲ್ಲಿ ಅನುದಾನ ಬಿಡುಗಡೆ ತಡವಾದರೂ ನಾವು ಕೆಲಸ ಮಾಡುತ್ತೇವೆ. ಕೆಲವೊಂದು ಬಾರಿ ತುರ್ತು ಸಂದರ್ಭದಲ್ಲಿ ಅಧಿಕಾರಿಗಳ ಬಾಯಿ ಮಾತಿನಲ್ಲೇ ಕೆಲಸ ಮಾಡಿಕೊಡುವ ಪದ್ಧತಿಯಿದೆ. ಆದರೆ ಕೆಲಸ ಮಾಡಿದ ಮೇಲೆ ಕೆಲಸ ಮಾಡಿಸಿದ ಅಧಿಕಾರಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ. ಆಗ ಗುತ್ತಿಗೆದಾರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ. ರಾಜ್ಯದಲ್ಲಿ ಅನೇಕ ದುರಂತಗಳಿಗೆ ಇದು ಕೂಡ ಕಾರಣವಾಗಿದೆ ಎಂದು ಹೇಳಿದ್ದಾರೆ.
ಹಿಂದಿನ ಸರ್ಕಾರಕ್ಕಿಂತ ಈಗಿನ ಸರ್ಕಾರದಲ್ಲಿ ಕಮಿಷನ್ ಪ್ರಮಾಣ ಜಾಸ್ತಿಯಾಗಿದೆ. ಕೆಂಪಣ್ಣನವರು ಆರೋಪ ಮಾಡಿದಾಗ ಕೆಲವರು ವಿರೋಧ ಮಾಡಿದ್ದೆವು. ಆ ಆರೋಪವನ್ನು ಉಪಯೋಗಿಸಿ ಈ ಸರ್ಕಾರ ಅಧಿಕಾರಕ್ಕೆ ಬಂತು. ಆದರೂ ಮತ್ತೆ ಅದಕ್ಕಿಂತ ಹೀನಾಯ ಪರಿಸ್ಥಿತಿ ಈಗ ಬಂದಿರುವುದು ನಮ್ಮ ದುರ್ದೈವ ಎಂದರು.
40 ಪರ್ಸೆಂಟ್ ಆರೋಪ ಸುಳ್ಳಲ್ಲ. ಪೂಜೆಯಿಂದ ಹಿಡಿದು ಬಿಲ್ ಮಾಡುವವರೆಗೆ ಎಲ್ಲವನ್ನು ಲೆಕ್ಕಹಾಕಿದರೆ ಹಿಂದೆ ಅಷ್ಟಾಗುತ್ತಿತ್ತು. ಈಗ ಅದಕ್ಕಿಂತ ಹೆಚ್ಚು ನೀಡಬೇಕಾಗಿದೆ. ಕೆಲವು ಸ್ಥಳೀಯ ಗುತ್ತಿಗೆದಾರರು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಮೇಲೆ ಅವಲಂಬಿತವಾಗಿರುತ್ತದೆ. ಮಾತುಕತೆ ಆದರೆ ಮಾತ್ರ ಪೂಜೆಗೆ ಬರುತ್ತೇನೆ ಎನ್ನುವವರು ಇದ್ದಾರೆ. ಈಗ ಕೆಲಸ ಮಾಡುವುದು ಸುಲಭವಲ್ಲ. ನೂರಾರು ಮೂಕರ್ಜಿಗಳು ಬರುತ್ತವೆ. ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾದ ಎನ್. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೂವರೆಗೆ ಸೇವೆ ಸಲ್ಲಿಸಿದ ಹಿರಿಯ ಗುತ್ತಿಗೆದಾರರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹಿರಿಯ ಮಹಿಳಾ ಗುತ್ತಿಗೆದಾರರಾದ ರಕ್ಷಮ್ಮ ಮತ್ತು ಶಕುಂತಲಾ ಅವರನ್ನೂ ಕೂಡ ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಜಿ.ಎಂ. ಜಗದೀಶ್ ಗುಡಮಘಟ್ಟ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಎಂ.ಎಸ್. ಶಂಕಗೌಡಶಾನಿ, ಗೌರವಾಧ್ಯಕ್ಷ ಜಗನ್ನಾಥ್ ಬಿ. ಶೇಜಿ, ಕೆ. ರಾಧಾಕೃಷ್ಣನಾಯಕ್, ಪ್ರಧಾನ ಕಾರ್ಯದರ್ಶಿ ಜಿ.ಎಂ. ರವೀಂದ್ರ, ಕೆ.ಎಸ್. ಶಾಂತೇಗೌಡ, ಸಿ.ಡಿ. ಕೃಷ್ಣ, ಡಿ.ಎಂ. ನಾಗರಾಜು, ಎಂ. ರಮೇಶ್, ಎಂ.ಹೆಚ್. ಯತಿರಾಜು, ಜಿಲ್ಲಾ ಗೌರವಾಧ್ಯಕ್ಷ ಕೆ.ಜಿ. ಪಾಟೀಲ್, ಪ್ರಭಾಕರ್ ಶೆಟ್ಟಿ, ಎಸ್.ಕೆ. ಧರ್ಮೇಶ್, ಜಿ.ಎ. ಪ್ರಕಾಶ್, ಹೆಚ್.ಸಿ. ಉಮೇಶ್, ಶ್ರೀನಿವಾಸ್ ರೆಡ್ಡಿ, ಲೋಕೇಶ್ ಆನಂದ್, ರಾಜೇಗೌಡ, ಶಿವಕುಮಾರ್, ಚನ್ನಬಸವರಾಜು, ಜಿ.ವಿ.ಎಂ. ರಾಜು ಮತ್ತಿತರರಿದ್ದರು.