ಬೆಂಗಳೂರು: ನೆಲಮಂಗಲ ಆರ್.ಟಿ.ಒ. ಕಚೇರಿಯಲ್ಲಿ ಮಹಿಳಾ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನೆಲಮಂಗಲ ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜ್ ಕುಮಾರ್ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಾಸನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಜ್ ಕುಮಾರ್ ಅವರನ್ನು ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ರಸ್ತೆಯಲ್ಲಿರುವ ನೆಲಮಂಗಲ ಪ್ರಾದೇಶಿಕ ಸಾರಿಗೆ ಕಚೇರಿಯ ಪ್ರಾದೇಶಿಕ ಸಾರಿಗೆ ಹೆಚ್ಚುವರಿ ಪ್ರಭಾರ ಅಧಿಕಾರಿಯಾಗಿ ಮೇ 30ರಂದು ನೇಮಕ ಮಾಡಲಾಗಿದೆ.
ಅವರು ತಮ್ಮ ಜೊತೆ ಆರ್.ಟಿ.ಒ. ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುವ ಮಹಿಳಾ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ದೂರು ದಾಖಲಾಗಿದೆ. ತಮ್ಮ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಾಗುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ರಾಜ್ ಕುಮಾರ್ ತಲೆಮರೆಸಿಕೊಂಡಿದ್ದಾರೆ. ಮಾದನಾಯಕನಹಳ್ಳಿ ಠಾಣೆ ಪೋಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.
ರಾಜ್ ಕುಮಾರ್ ತಮ್ಮ ಕೊಠಡಿಗೆ ನನ್ನನ್ನು ಕರೆಸಿಕೊಂಡು ಬೆದರಿಕೆ ಹಾಕಿ ಬಲವಂತವಾಗಿ ನಾನು ಹಾಕಿಕೊಂಡಿದ್ದ ಜರ್ಕಿನ್ ಬಿಚ್ಚಿಸಿ ಕೆಟ್ಟದಾಗಿ ದಿಟ್ಟಿಸಿ ನೋಡಿದ್ದಾರೆ. ಈ ಹಿಂದೆಯೂ ಸಮವಸ್ತ್ರದಲ್ಲಿದ್ದಾಗ ಕೆಟ್ಟದಾಗಿ ನೋಡುತ್ತಿದ್ದರು. ಇದರಿಂದ ಮುಜುಗರಕ್ಕೀಡಾಗಿ ಕೆಲಸ ಬಿಡಲು ಯೋಚಿಸಿದ್ದೆ. ಪತಿ ಧೈರ್ಯ ತುಂಬಿ ಜರ್ಕಿನ್ ಹಾಕಿಕೊಂಡು ಹೋಗುವಂತೆ ಸಲಹೆ ನೀಡಿದ್ದರು ಎಂದು ಆರ್.ಟಿ.ಒ. ಮಹಿಳಾ ಇನ್ಸ್ಪೆಕ್ಟರ್ ದೂರು ನೀಡಿದ್ದಾರೆ.