ಪುಣೆಯ ರೆಸ್ಟೋರೆಂಟ್ ಒಂದರ ಮೆನುವಿನ ಛಾಯಾಚಿತ್ರವೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ಆಹಾರವನ್ನು ವ್ಯರ್ಥ ಮಾಡಿದ್ದಕ್ಕಾಗಿ ಗ್ರಾಹಕರಿಗೆ 20 ರೂ. ದಂಡ ವಿಧಿಸಲಾಗುತ್ತದೆ ಎಂದು ಹೇಳಲಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
“ನೀವು ಆಹಾರವನ್ನು ವ್ಯರ್ಥ ಮಾಡಿದರೆ ಪುಣೆಯ ಹೋಟೆಲ್ 20 ರೂ. ಹೆಚ್ಚುವರಿಯಾಗಿ ವಿಧಿಸುತ್ತಿದೆ. ಪ್ರತಿಯೊಂದು ರೆಸ್ಟೋರೆಂಟ್ ಕೂಡ ಅದೇ ರೀತಿ ಮಾಡಬೇಕು; ಮದುವೆಗಳು ಮತ್ತು ಸಮಾರಂಭಗಳು ಸಹ ದಂಡ ವಿಧಿಸಲು ಪ್ರಾರಂಭಿಸಬೇಕು.” ಎಂದು ರೋನಿತಾ ಅವರು X ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಈಗಾಗಲೇ 11,500 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.
ಮೆನು ಬೋರ್ಡ್‌ನ ಚಿತ್ರವು ರೆಸ್ಟೋರೆಂಟ್‌ನಲ್ಲಿ ಲಭ್ಯವಿರುವ ವಿವಿಧ ಆಹಾರ ಪದಾರ್ಥಗಳನ್ನು ಪಟ್ಟಿ ಮಾಡಿದೆ, ಆದರೆ ಹಲವಾರು ಬಳಕೆದಾರರು ಗಮನಿಸಿದ ವಿಷಯವೆಂದರೆ ಕೆಳಭಾಗದಲ್ಲಿ ಒಂದು ದಪ್ಪ ಸಾಲನ್ನು: “ಆಹಾರ ವ್ಯರ್ಥ ಮಾಡಿದ್ದಕ್ಕಾಗಿ ನಿಮಗೆ 20 ರೂ. ಶುಲ್ಕ ವಿಧಿಸಲಾಗುತ್ತದೆ.” ಎಂದು ತಿಳಿಸಲಾಗಿದೆ.
“ಆಹಾರ ವ್ಯರ್ಥಕ್ಕೆ ಶುಲ್ಕ ವಿಧಿಸುವುದು ಒಂದು ಬುದ್ಧಿವಂತ ಕ್ರಮ, ಇದು ಜವಾಬ್ದಾರಿಯನ್ನು ಉತ್ತೇಜಿಸುತ್ತದೆ. ಇದನ್ನು ಮದುವೆಗಳು ಅಥವಾ ಕಾರ್ಯಕ್ರಮಗಳಿಗೆ ವಿಸ್ತರಿಸುವುದರಿಂದ ಬೃಹತ್ ಆಹಾರ ತ್ಯಾಜ್ಯ ಬಿಕ್ಕಟ್ಟನ್ನು ತಡೆಯಬಹುದು. ಈ ಮಾದರಿಯನ್ನು ಅಳವಡಿಸಿಕೊಳ್ಳಬೇಕು” ಎಂದು ಬಳಕೆದಾರರು ಹೇಳಿದ್ದಾರೆ.
ಆದಾಗ್ಯೂ, ಕೆಲವು ಬಳಕೆದಾರರು ಆಕ್ಷೇಪಿಸಿದ್ದಾರೆ. ಆಹಾರ, ಖಾದ್ಯ ಚೆನ್ನಾಗಿಲ್ಲದಿದ್ದರೆ ಅಥವಾ ನನ್ನ ಅಭಿರುಚಿಗೆ ಸರಿಹೊಂದದಿದ್ದರೆ ಏನು? ನನಗೆ ಅದು ಮೊದಲೇ ತಿಳಿದಿರುವುದಿಲಿಲ್ಲ. ನನ್ನನ್ನು ತೃಪ್ತಿಪಡಿಸಲು ವಿಫಲವಾದ ಕಾರಣ ನಾನು ಅವರಿಗೆ ಇಪ್ಪತ್ತು ರೂಪಾಯಿಗಳನ್ನು ವಿಧಿಸಬಹುದೇ? ಆಹಾರ ವ್ಯರ್ಥವನ್ನು ಬೆಂಬಲಿಸುತ್ತಿಲ್ಲ, ಆದರೆ ಅಸಂಬದ್ಧ ನೀತಿಗಳನ್ನು ವಿರೋಧಿಸುತ್ತೇನೆ” ಎಂದು ಬಳಕೆದಾರರಲ್ಲಿ ಒಬ್ಬರು ಹೇಳಿದರು.
ಈ ವೈರಲ್ ಪೋಸ್ಟ್ ಈಗ ಆಹಾರ ವ್ಯರ್ಥ ತಡೆಯಲು ದಂಡ ಪರಿಹಾರವಾಗಬಹುದೇ ಎಂಬ ಬಗ್ಗೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.
