ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಪ್ರತಿಕ್ರಿಯೆ ಮತ್ತು ನಂತರದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ಬಗ್ಗೆ ಶಾಲಾ ಮಕ್ಕಳಿಗೆ ಕಲಿಸಲು ಎನ್ಸಿಇಆರ್ಟಿ ಆಪರೇಷನ್ ಸಿಂಧೂರ್ ಕುರಿತು ವಿಶೇಷ ಮಾಡ್ಯೂಲ್(ಕೋರ್ಸ್ ನ ಒಂದು ಭಾಗ) ಅನ್ನು ಹೊರತಂದಿದೆ.
3 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಉದ್ದೇಶಿಸಲಾದ ಈ ಮಾಡ್ಯೂಲ್ ದೇಶದ ರಕ್ಷಣಾ ಸನ್ನದ್ಧತೆ, ಹೊಸ ತಂತ್ರಜ್ಞಾನದ ಬಳಕೆ ಮತ್ತು ಹೆಚ್ಚುತ್ತಿರುವ ಜಾಗತಿಕ ಪಾತ್ರವನ್ನು ವಿವರಿಸುತ್ತದೆ.
ಆಪರೇಷನ್ ಸಿಂಧೂರ್ ಬಗ್ಗೆ ವಿವರಗಳನ್ನು ಪರಿಶೀಲಿಸುವ ಮೊದಲು, ಮಾಡ್ಯೂಲ್ ಭಾರತದಲ್ಲಿ ಶಾಂತಿಯನ್ನು ಭಂಗಗೊಳಿಸಲು ಪಾಕಿಸ್ತಾನ ಮಾಡಿದ ಹಲವಾರು ಪ್ರಯತ್ನಗಳನ್ನು ಸಂಕ್ಷಿಪ್ತವಾಗಿ ಉಲ್ಲೇಖಿಸುತ್ತದೆ. 2016ರಲ್ಲಿ ಉರಿ ದಾಳಿ ಮತ್ತು 2019 ರ ಪುಲ್ವಾಮಾ ದಾಳಿಯಂತಹ ನಿರ್ದಿಷ್ಟ ಭಯೋತ್ಪಾದಕ ದಾಳಿಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.
ಈ ವರ್ಷದ ಮೇ ತಿಂಗಳಲ್ಲಿ ಪ್ರಾರಂಭಿಸಲಾದ ಆಪರೇಷನ್ ಸಿಂದೂರ್, ಏಪ್ರಿಲ್ ನಲ್ಲಿ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ಹೇಡಿತನದ ದಾಳಿಗೆ ಭಾರತ ನೀಡಿದ “ಬಲವಾದ ಮತ್ತು ಸ್ಪಷ್ಟವಾದ ಪ್ರತಿಕ್ರಿಯೆ” ಎಂದು ಮಾಡ್ಯೂಲ್ ಉಲ್ಲೇಖಿಸುತ್ತದೆ. ಭಯೋತ್ಪಾದಕ ದಾಳಿಯು 26 ಜೀವಗಳನ್ನು ಬಲಿ ತೆಗೆದುಕೊಂಡಿತು ಮತ್ತು “ಭಯೋತ್ಪಾದಕರ ಗುರಿ ಭಯ ಮತ್ತು ಧಾರ್ಮಿಕ ಉದ್ವಿಗ್ನತೆಯನ್ನು ಸೃಷ್ಟಿಸುವುದಾಗಿತ್ತು” ಎಂದು ಮಾಡ್ಯೂಲ್ ಉಲ್ಲೇಖಿಸುತ್ತದೆ.