ಚಿಕ್ಕಮಗಳೂರು : ಕುಡಿದ ಮತ್ತಿನಲ್ಲಿ ತಂದೆಯನ್ನೇ ಕೊಂದು, ಶವಸಂಸ್ಕಾರಕ್ಕೆ ತಯಾರಿ ನಡೆಸಿದ್ದ ಮಗನೋರ್ವ ಅರೆಸ್ಟ್ ಆಗಿದ್ದಾನೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸಮೀಪದ ಗುಪ್ತಶೆಟ್ಟಿಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಮಂಜುನಾಥ್ (51) ಕೊಲೆಯಾದ ವ್ಯಕ್ತಿ. ಮಗ ರಂಜನ್ (21) ಕೊಲೆ ಮಾಡಿದ ಭೂಪ. ತಂದೆಯನ್ನೇ ಕೊಂದು ಎಲ್ಲರ ಬಳಿ ಕತೆ ಕಟ್ಟಿ ಶವಸಂಸ್ಕಾರ ಮಾಡಲು ಕೂಡ ಮುಂದಾಗಿದ್ದನು. ಆದರೆ ಅನುಮಾನ ಬಂದು ಪೊಲೀಸರು ನಡೆಸಿದ ತನಿಖೆಯಲ್ಲಿ ಪಾಪಿ ಮಗನ ಕೃತ್ಯ ಬಯಲಾಗಿದೆ.
ಆರೋಪಿ ರಂಜನ್ ಆ.16 ರಂದು ರಾತ್ರಿ ಮದ್ಯಪಾನ ಮಾಡಿ ಮನೆಗೆ ಬಂದಿದ್ದನು. ಈ ವೇಳೆ ಅಪ್ಪ-ಅಮ್ಮನ ನಡುವೆ ಜಗಳ ನಡೆದಿದೆ. ಜಗಳ ಬಿಡಿಸಲು ಹೋದ ರಂಜನ್ ತಂದೆಗೆ ಚಾಕು ಇರಿದಿದ್ದಾನೆ. ಇದರಿಂದ ಭಯಗೊಂಡ ತಾಯಿ ಗಾಯಕ್ಕೆ ಅರಿಶಿನ ಪುಡಿ ಹಚ್ಚಿ ಮಲಗಿಸಿದ್ದಾರೆ. ರಾತ್ರಿ ರಕ್ತಸ್ರಾವ ಹೆಚ್ಚಾಗಿ ಮಂಜುನಾಥ್ ಮೃತಪಟ್ಟಿದ್ದಾರೆ. ಊರಿನವರ ಹತ್ತಿರ ತನ್ನ ತಂದೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಕಥೆ ಹೇಳಿದ್ದನಂತೆ. ಅಲ್ಲದೇ ಅಂತ್ಯಸಂಸ್ಕಾರ ನಡೆಸಲು ಕೂಡ ತಯಾರಿ ನಡೆಸಲಾಗಿತ್ತು. ಅನುಮಾನಗೊಂಡ ಆಲ್ದೂರು ಪೊಲೀಸರು ರಂಜನ್ ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.