ಚಿಕ್ಕಮಗಳೂರು : ಡೆತ್ ನೋಟ್ ಬರೆದಿಟ್ಟು ಆಟೋ ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುದುರೆಮುಖ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಕಾನ್ಸ್ ಟೇಬಲ್ ನನ್ನು ಸಿದ್ದೇಶ್ ಎಂದು ಗುರುತಿಸಲಾಗಿದೆ. ಆಗಸ್ಟ್ 13 ರಂದು ಆಟೋ ಚಾಲಕ ನಾಗೇಶ್ (32) ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.
ಪೊಲೀಸರ ಕಿರುಕುಳಕ್ಕೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟು ನಾಗೇಶ್ ಸೂಸೈಡ್ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ಆರೋಪಿ ಪೇದೆ ಸಿದ್ದೇಶ್ ಗೋವಾಗೆ ಎಸ್ಕೇಪ್ ಆಗಿದ್ದರು. ಸದ್ಯ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತನ್ನ ಮೇಲೆ ಕುದುರೆ ಮುಖ ಠಾಣೆಯ ಕಾನ್ಸ್ಟೇಬಲ್ ಸಿದ್ದೇಶ್ ಹಾಗೂ ಇಬ್ಬರು ಸ್ಥಳೀಯರು ಹಲ್ಲೆ ನಡೆಸಿದ್ದಾರೆ ಎಂದು ಕಳಸ ಠಾಣೆಯಲ್ಲಿ ನಾಗೇಶ್ ದೂರು ನೀಡಿದ್ದರು. ಹಾಗೂ ಚಿಕ್ಕಮಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಾಗೇಶ್ ಪೊಲೀಸರ ವಿರುದ್ಧ ದೂರು ನೀಡಿದ ಬೆನ್ನಲ್ಲೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಆತನ ವಿರುದ್ಧ ಕುದುರೆ ಮುಖ ಪೊಲೀಸರು ಪ್ರಕರಣ ದಾಖಲಿಸಿದ್ದರು. ಹಾಗೂ ನಾಗೇಶ್ ಅವರ ಆಟೊ ಮತ್ತು ಔಷಧ ಸಿಂಪರಣೆ ಯಂತ್ರವನ್ನು ವಶ ಪಡಿಸಿಕೊಂಡಿದ್ದರು ಎನ್ನಲಾಗಿತ್ತು. ಇದರಿಂದ ಮನನೊಂದ ನಾಗೇಶ್ ಸೂಸೈಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.