ನವದೆಹಲಿ: ದೀಪಾವಳಿ ವೇಳೆಗೆ ಸಣ್ಣ ಕಾರ್ ಗಳು ಅಗ್ಗವಾಗಲಿವೆ. ಜಿಎಸ್ಟಿ ಇಳಿಕೆಯಿಂದ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಕಾರ್ ಮಾರುಕಟ್ಟೆ ಭಾರಿ ಚೇತರಿಕೆ ಕಾಣುವ ನಿರೀಕ್ಷೆ ಇದೆ.
ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಜಿಎಸ್ಟಿ ಸ್ವರೂಪದಲ್ಲಿ ವ್ಯಾಪಕ ಬದಲಾವಣೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಬದಲಾಗಲಿರುವ ಪ್ರಸ್ತಾವನೆಗಳಲ್ಲಿ ಸಣ್ಣ ಕಾರ್ ಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸುವುದು ಕೂಡ ಸೇರಿದೆ.
ಪೆಟ್ರೋಲ್ ಮತ್ತು ಡೀಸೆಲ್ ಕಾರ್ ಗಳ ಮೇಲೆ ಈಗ ಇರುವ ಶೇಕಡ 28 ರಷ್ಟು ಜಿಎಸ್ಟಿಯನ್ನು ಶೇಕಡ 18ಕ್ಕೆ ಇಳಿಸಲು ಸರ್ಕಾರ ಸೂಚಿಸಿದೆ. ಶೇಕಡ 12.5 ರಷ್ಟು ತೆರಿಗೆ ಇಳಿಕೆಯಿಂದ ಸಣ್ಣ ಕಾರ್ ಗಳ ಬೆಲೆಯಲ್ಲಿ ಭಾರಿ ಇಳಿಕೆಯಾಗುವ ಸಾಧ್ಯತೆ ಇದೆ.
ಸಣ್ಣ ಕಾರುಗಳನ್ನು ಶೇಕಡ 18ರ ತೆರಿಗೆ ಸ್ಲ್ಯಾಬ್ ಗೆ ತರುವ ಸಾಧ್ಯತೆ ಇದೆ. 4 ಮೀಟರ್ ಗಿಂತ ಕಡಿಮೆ ಉದ್ದ ಹಾಗೂ 1,200 ಸಿಸಿವರೆಗಿನ ಇಂಜಿನ್ ಸಾಮರ್ಥ್ಯದ ಪೆಟ್ರೋಲ್, ಡೀಸೆಲ್, ಸಿಎನ್ಜಿ ,ಎಲ್ಪಿಜಿ ಕಾರ್ ಗಳು ಕಡಿಮೆ ತೆರಿಗೆ ವ್ಯಾಪ್ತಿಗೆ ಬಂದರೆ ಬೆಲೆ ಕಡಿಮೆಯಾಗಿ ಮಾರಾಟ ವೃದ್ಧಿಸುತ್ತದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಜಿಎಸ್ಟಿ ಕಡಿತವಾದರೆ ಸಣ್ಣ ಕಾರ್ ಗಳ ಎಕ್ಸ್ ಶೋರೂಂ ಬೆಲೆ ಶೇಕಡ 12 ರಿಂದ 12.5 ರಷ್ಟು ಕಡಿಮೆಯಾಗುತ್ತದೆ. ಒಟ್ಟು ಕಡಿತದ ವೆಚ್ಚ 20 ರಿಂದ 25 ಸಾವಿರ ರೂ.ವರೆಗೂ ಇರಲಿದೆ ಎನ್ನಲಾಗಿದೆ.