ಬೆಂಗಳೂರು: ಸುಪ್ರೀಂಕೋರ್ಟ್ ಆದೇಶದಂತೆ ವಾಸ ಯೋಗ್ಯ ಪ್ರಮಾಣ ಪತ್ರ(ಓಸಿ) ಪಡೆದುಕೊಳ್ಳದ 4 ಲಕ್ಷ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ, ನೀರು ನಿಲ್ಲಿಸಲಾಗಿದೆ. ಇವುಗಳಲ್ಲಿ 30X40 ಅಳತೆಯ ಎರಡು ಮಹಡಿ ಕಟ್ಟಡಗಳಿಗೆ ವಿನಾಯಿತಿ ನೀಡುವ ಕುರಿತಾಗಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಮಂಡಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಸೇರಿ ರಾಜ್ಯದಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣ ಹೆಚ್ಚಾಗಿದೆ. ನಗರದಲ್ಲಿ ಶೇಕಡ 70ರಷ್ಟು ಕಟ್ಟಡ ನಿರ್ಮಾಣ ಅಕ್ರಮವಾಗಿದೆ. ಸಾಮರ್ಥ್ಯಕ್ಕಿಂತ ಹೆಚ್ಚು ಮಹಡಿ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕಾಗಿಯೇ ಸುಪ್ರೀಂಕೋರ್ಟ್ ಆದೇಶ ಮಾಡಿದ್ದು, ನಕ್ಷೆ ಮಂಜೂರಾತಿ ಪ್ರಕಾರ ಕಟ್ಟಡ ನಿರ್ಮಿಸಿ ವಾಸ ಯೋಗ್ಯ ಪ್ರಮಾಣ ಪತ್ರ ಪಡೆಯಬೇಕು. ಓಸಿ ಇಲ್ಲದ ಕಟ್ಟಡಗಳಿಗೆ ನೀರು, ವಿದ್ಯುತ್ ಸಂಪರ್ಕ ನೀಡಬಾರದು ಎಂದು ಸೂಚನೆ ನೀಡಿದೆ. ಹೀಗಾಗಿ ರಾಜ್ಯದಲ್ಲಿ 4 ಲಕ್ಷ ಸಂಪರ್ಕಗಳನ್ನು ನಿಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
30X40 ಅಳತೆಯ ಎರಡು ಮಹಡಿ ಕಟ್ಟಡಗಳಿಗೆ ವಿನಾಯಿತಿ ನೀಡಬೇಕೆಂಬ ಒತ್ತಾಯ ಕೇಳಿ ಬಂದಿದ್ದು, ಮುಂದಿನ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಎಂದು ತಿಳಿಸಿದ್ದಾರೆ.