ಚಿತ್ರದುರ್ಗ: ಧರ್ಮಸ್ಥಳ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹಿಂದೆ ಟಿಪ್ಪು ಗ್ಯಾಂಗ್ ಇದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಟಿಪ್ಪು ಜಯಂತಿ ಆಚರಿಸಿದರಲ್ಲ, ಅದೇ ರೀತಿಯ ಗ್ಯಾಂಗ್ ವೊಂದರಿಂದ ಒತ್ತಡ ಹಾಕಲಾಗಿದೆ. ಯಾವನೋ ಅನಾಮಿಕ ಕೊಟ್ಟ ದೂರಿನಿಂದ ದೊಡ್ಡದು ಮಾಡಿದ್ದಾರೆ. ನೂರಾರು ಕೊಲೆಗಳು, ಅತ್ಯಾಚಾರ ಆಗಿವೆ ಎನ್ನುವಂತೆ ಬಿಂಬಿಸಿದ್ದಾರೆ. ಧರ್ಮಸ್ಥಳದ ವೀರೇಂದ್ರ ಹೆಗಡೆ ಮಾಡಿದ್ದಾರೆ ಎನ್ನುವಂತೆ ಬಿಂಬಿಸಿದ್ದಾರೆ ಎಂದು ದೂರಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸ್ಪಿ, ಡಿಸಿಗೆ ಸಾವಿರ ದೂರು ಬರುತ್ತವೆ. ಎಲ್ಲಾ ದೂರುಗಳಿಗೂ ಎಸ್ಐಟಿ ರಚಿಸುತ್ತಾರೆಯೇ ಎಂದು ಅಶೋಕ್ ಪ್ರಶ್ನಿಸಿದ್ದಾರೆ. ಮುಸುಕುಧಾರಿಗೆ ಹಣ ಕೊಟ್ಟು ಕರೆದುಕೊಂಡು ಬಂದಿರುವ ಹಾಗಿದೆ. ವಿದೇಶದಿಂದ ಹಣ ಬರುತ್ತಿದೆಯೇ? ಹಣ ಎಲ್ಲಿಂದ ಬರುತ್ತದೆ ಎಂದು ಗೊತ್ತಾಗಬೇಕು. ಧರ್ಮಸ್ಥಳದ ಮಂಜುನಾಥ ದೇವರಿಗೆ ಅವಹೇಳನ ಮಾಡುವ ಷಡ್ಯಂತ್ರ ನಡೆದಿದೆ. ಜೆಡಿಎಸ್ ಹಾಗೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ರೀತಿ ಆಗಿರಲಿಲ್ಲ. ಆದರೆ ಸಿದ್ದರಾಮಯ್ಯ ಸರ್ಕಾರದಲ್ಲಿ ಟಿಪ್ಪು ಗ್ಯಾಂಗ್ ನಿಂದ ಷಡ್ಯಂತ್ರ ನಡೆದಿದೆ. ಸೋಶಿಯಲ್ ಮೀಡಿಯಾ, ಯೂಟ್ಯೂಬರ್ ಗಳ ಮೂಲಕ ಅಪಪ್ರಚಾರ ನಡೆಸಲಾಗುತ್ತಿದೆ. ಯೂಟ್ಯೂಬರ್ ಸಮೀರ್ ಸಹ ಟಿಪ್ಪು ಗ್ಯಾಂಗ್ ಎಂದು ಅಶೋಕ್ ಕಿಡಿ ಕಾರಿದ್ದಾರೆ.
ಸರ್ಕಾರಕ್ಕೆ ಧರ್ಮದ ಬಗ್ಗೆ ಕಾಳಜಿ ಇದ್ದರೆ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು. ಷಡ್ಯಂತ್ರಕ್ಕೆ ಪ್ರೇರಣೆ ನೀಡಿದವರು ಯಾರು ಎಂಬುದು ಬಯಲಾಗಬೇಕು. ಸಿಎಂ ಸಿದ್ದರಾಮಯ್ಯನವರಿಗೆ ಒಪ್ಪಿಸಿದವರು ಯಾರು ಎಲ್ಲವೂ ಗೊತ್ತಾಗಬೇಕು. ಈ ತನಿಖೆ ಇಲ್ಲಿಗೆ ಮುಚ್ಚಿ ಹೋಗುತ್ತದೆ ಅನಿಸುತ್ತದೆ. ಹೀಗಾಗಿ ಪ್ರಕರಣವನ್ನು ಎನ್ಐಎ ನೀಡಿ ಸಂಪೂರ್ಣ ತನಿಖೆಯಾಗಬೇಕು. ಈ ತಂಡ ಯಾವ ಯಾವ ದೇವಸ್ಥಾನಕ್ಕೆ ಸಂಚು ರೂಪಿಸಿದೆ ಎನ್ನುವುದು ಗೊತ್ತಾಗಬೇಕು ಚಿತ್ರದುರ್ಗದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.