ದಾವಣಗೆರೆ: ಬಹಿರ್ದೆಸೆಗೆ ತೆರಳಿದ್ದ ಒಂಟಿ ಮಹಿಳೆ ಮೇಲೆ ಕರಡಿಯೊಂದು ತನ್ನ ಎರಡು ಮರಿಗಳ ಜೊತೆ ದಿಢೀರ್ ದಾಳಿ ಮಾಡಿದೆ. ಈ ವೇಳೆ ಎದೆಗುಂದದೆ ಹೋರಾಡಿದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜಗಳೂರು ತಾಲೂಕಿನ ಗೋಪಗೊಂಡನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ರಾಜನಹಳ್ಳಿ ಗ್ರಾಮದ ನೇತ್ರಾವತಿ ಕರಡಿಯೊಂದಿಗೆ ಹೋರಾಡಿ ಪ್ರಾಣ ಉಳಿಸಿಕೊಂಡ ಧೀರ ಮಹಿಳೆಯಾಗಿದ್ದಾರೆ. ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿರುವ ಅವರು ಪತಿ, ಮಕ್ಕಳೊಂದಿಗೆ ಅಲ್ಲೇ ವಾಸವಾಗಿದ್ದಾರೆ.
ಕೋಳಿ ಫಾರಂ ಸುತ್ತಲಿನ ಭಾಗದಲ್ಲಿ ದಟ್ಟ ಅರಣ್ಯ ಇದ್ದು, ಅರಣ್ಯದ ದಾರಿಯಲ್ಲಿ ಬಹಿರ್ದೆಸೆಗೆ ಹೋಗುತ್ತಿದ್ದಾಗ ಎರಡು ಮರಿಗಳಿದ್ದ ತಾಯಿ ಕರಡಿ ಏಕಾಏಕಿ ದಾಳಿ ಮಾಡಿದೆ. ರಕ್ಷಣೆಗಾಗಿ ಅವರು ಕೂಗಾಡಿದ್ದು ಯಾರೂ ಬಂದಿಲ್ಲ. ಎದೆಗುಂದದೆ ಹೋರಾಡಿದ ನೇತ್ರಾವತಿ ದೊಡ್ಡ ಕರಡಿಯನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದ್ದಾರೆ. ಆದರೂ ಕರಡಿ ನೇತ್ರಾವತಿಯವರನ್ನು ಗಾಯ ಮಾಡಿದೆ. ಈ ವೇಳೆ ದೊಡ್ಡ ಮರವೊಂದರ ಪೊದೆಯಲ್ಲಿ ರಕ್ಷಣೆ ಪಡೆಯಲು ಯತ್ನಿಸಿ ಓಡುವಾಗ ಗುಂಡಿಯಲ್ಲಿ ಬಿದ್ದಿದ್ದಾರೆ. ಧೃತಿಗೆಡದೆ ಅರಣ್ಯ ಪ್ರದೇಶದಿಂದ ರಸ್ತೆ ತಲುಪಿದ ಅವರು ಬದುಕುಳಿದಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.