ಕೊಲ್ಕತ್ತಾ: ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 19 ರಲ್ಲಿ ನಿಂತಿದ್ದ ಟ್ರಕ್ ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ 10 ಜನರು ಸಾವನ್ನಪ್ಪಿದ್ದು, 37 ಜನರು ಗಾಯಗೊಂಡಿದ್ದಾರೆ.
ಮೃತರಲ್ಲಿ ಎಂಟು ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಬುರ್ದ್ವಾನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ, ಒಬ್ಬ ಪ್ರಯಾಣಿಕನ ಸ್ಥಿತಿ ಗಂಭೀರವಾಗಿದೆ ಮತ್ತು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಬಸ್ ಬುರ್ದ್ವಾನ್‌ನಿಂದ ದುರ್ಗಾಪುರದ ಕಡೆಗೆ ತೆರಳುತ್ತಿತ್ತು. ಬಸ್ ನಲ್ಲಿ ಗಂಗಾಸಾಗರ್‌ನಿಂದ ಹಿಂತಿರುಗುತ್ತಿದ್ದ ಯಾತ್ರಿಕರು ಇದ್ದರು. ಹೆಚ್ಚಿನ ಪ್ರಯಾಣಿಕರು ಬಿಹಾರದ ಮೋತಿವಾರಿ ಜಿಲ್ಲೆಯವರು. ಪ್ರಯಾಣಿಕರಲ್ಲಿ ಆರು ಮಕ್ಕಳು ಸೇರಿದ್ದಾರೆ, ಅವರೂ ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಬಸ್ ಗಂಗಾಸಾಗರ್ ನಿಂದ ಹಿಂತಿರುಗುತ್ತಿದ್ದ ಯಾತ್ರಾರ್ಥಿಗಳಿಂದ ತುಂಬಿತ್ತು. ಘಟನೆಯಲ್ಲಿ ಹತ್ತು ಜನರು ಸಾವನ್ನಪ್ಪಿದ್ದರು. ಬಸ್ ನೊಳಗೆ ಆರು ಮಕ್ಕಳಿದ್ದರು, ಮತ್ತು ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ನಾವು ಅವರನ್ನು ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಕಳುಹಿಸುತ್ತಿದ್ದೇವೆ. ಆಡಳಿತವು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ ಎಂದು ಪುರ್ಬಾ ಬರ್ಧಮಾನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಯೇಷಾ ರಾಣಿ ಎ. ಹೇಳಿದ್ದಾರೆ.