ಬೆಂಗಳೂರು: ವೈದ್ಯಕೀಯ ತುರ್ತು ಅಗತ್ಯಗಳಿಗೆ ಬಿಪಿಎಲ್ ಅಡಿ ಸೇವೆ ಪಡೆಯಲು 24 ಗಂಟೆಯಲ್ಲಿ ಕಾರ್ಡ್ ನೀಡಲು ಪ್ರತ್ಯೇಕ ಪೋರ್ಟಲ್ ವ್ಯವಸ್ಥೆ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಡಾ. ವೈ. ಭರತ್ ಶೆಟ್ಟಿ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ರಾಜ್ಯದಲ್ಲಿ ಅರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲು ಅನರ್ಹ 13 ಲಕ್ಷ ಬಿಪಿಎಲ್ ಕಾರ್ಡ್ ರದ್ದುಪಡಿಸಲು ಪ್ರತಿಪಕ್ಷದ ಸದಸ್ಯರು ಒಪ್ಪಿದರೆ ಕಾರ್ಯಾಚರಣೆ ಆರಂಭಿಸುತ್ತೇವೆ. ಅಲ್ಲಿಯವರೆಗೆ ವೈದ್ಯಕೀಯ ತುರ್ತು ಅಗತ್ಯಗಳಿಗೆ ಬಿಪಿಎಲ್ ಅಡಿ ಸೇವೆ ಪಡೆಯಲು 24 ಗಂಟೆಯಲ್ಲಿ ಕಾರ್ಡ್ ನೀಡಲು ಪ್ರತ್ಯೇಕ ಪೋರ್ಟಲ್ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಹೊಸದಾಗಿ ಕಳೆದ ಹಲವು ವರ್ಷಗಳಿಂದ ಬಿಪಿಎಲ್ ಕಾರ್ಡ್ ನೀಡುತ್ತಿಲ್ಲ. ಇದರಿಂದ ಲಕ್ಷಾಂತರ ಬಡವರಿಗೆ ವೈದ್ಯಕೀಯ ತುರ್ತು ಸೇವೆ ಸಿಗದೇ ಪರದಾಡುವಂತಾಗಿದೆ ಎಂದು ಡಾ. ಭರತ್ ಶೆಟ್ಟಿ ಹೇಳಿದರು.
ಇದಕ್ಕೆ ಉತ್ತರ ನೀಡಿದ ಸಚಿವ ಮುನಿಯಪ್ಪ, ವೈದ್ಯಕೀಯ ಚಿಕಿತ್ಸೆಯ ತುರ್ತು ಸಂದರ್ಭದಲ್ಲಿ ಪ್ರತ್ಯೇಕ ಬಿಪಿಎಲ್ ಸೌಲಭ್ಯದ ಕಾರ್ಡ್ ಆರೋಗ್ಯ ಕಾರ್ಡ್ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಉತ್ತರಿಸಿದ್ದಾರೆ.
ಇದಕ್ಕೆ ಆಕ್ಷೇಪಿಸಿದ ಬಿಜೆಪಿ ಸದಸ್ಯ ಕೆ. ಗೋಪಾಲಯ್ಯ, ವೈದ್ಯಕೀಯ ತುರ್ತು ಸೇವೆಗೂ ಬಿಪಿಎಲ್ ಸೌಲಭ್ಯ ಪಡೆಯಲು ಕಾರ್ಡ್ ನೀಡುತ್ತಿಲ್ಲ. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ತಿಂಗಳಿಗೊಮ್ಮೆ ಅವಕಾಶ ನೀಡಲಾಗುತ್ತದೆ. ಅದು ಜನರಿಗೆ ಗೊತ್ತಾಗುವುದಿಲ್ಲ ಎಂದು ದೂರಿದ್ದಾರೆ.