ರಾಜ್ಯದಲ್ಲಿ ಟೆಸ್ಕೋ ಕಂಪನಿ ನೂತನ ಘಟಕ, 15 ಸಾವಿರ ಉದ್ಯೋಗ ಸೃಷ್ಟಿ

ಬೆಂಗಳೂರು: ಬ್ರಿಟನ್ ಮೂಲದ ಟೆಸ್ಕೋ ಕಂಪನಿ ರಾಜ್ಯದಲ್ಲಿ ನೂತನ ವಿತರಣಾ ಕೇಂದ್ರ ಸ್ಥಾಪಿಸಲು ಮುಂದಾಗಿದೆ. ಇದರಿಂದ 15 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಭಾರತ ಮತ್ತು ಬ್ರಿಟನ್ ನಡುವೆ ಇತ್ತೀಚೆಗೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಟ್ಟ ಹಿನ್ನೆಲೆಯಲ್ಲಿ ಇಲ್ಲಿನ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಏರ್ಪಡಿಸಿದ್ದ ಸಂತೋಷಕೂಟ ಸಮಾರಂಭದಲ್ಲಿ ಅವರು ಮಾತನಾಡಿದರು.

ಇದರೊಂದಿಗೆ ರೋಲ್ಸ್ ರಾಯ್ ಕಂಪನಿ ಕೂಡ ರಾಜ್ಯದಲ್ಲಿ ಬಂಡವಾಳ ಹೂಡಿಕೆಯ ಹೊಸ ಅವಕಾಶಗಳನ್ನು ಹುಡುಕುತ್ತಿದ್ದು, ಇದಕ್ಕೆ ಪೂರಕವಾಗಿ ಸರ್ಕಾರವು ಅಗತ್ಯ ಪ್ರಕ್ರಿಯೆಗಳನ್ನು ಶೀಘ್ರವಾಗಿ ಪೂರೈಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಉಭಯ ದೇಶಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದದಿಂದ ಸದ್ಯಕ್ಕೆ ವಾರ್ಷಿಕ 25 ಬಿಲಿಯನ್ ಪೌಂಡ್ ಮೊತ್ತದ ವಹಿವಾಟು ನಡೆಯಲಿದೆ. ಮುಂದಿನ ಐದು ವರ್ಷಗಳಲ್ಲಿ ಇದು 90 ಬಿಲಿಯನ್ ಪೌಂಡ್ ಗೆ ಹೆಚ್ಚಾಗಲಿದೆ. ಮುಖ್ಯವಾಗಿ ಭಾರತದಿಂದ ಬ್ರಿಟನ್ ಗೆ ರಫ್ತಾಗುವ ಸರಕುಗಳ ಪೈಕಿ ಶೇಕಡ 99 ರಷ್ಟು ಉತ್ಪನ್ನಗಳಿಗೆ ಮತ್ತು ಅಲ್ಲಿಂದ ಇಲ್ಲಿಗೆ ಬರುವ ಶೇಕಡ 90ರಷ್ಟು ಉತ್ಪನ್ನಗಳಿಗೆ ಸುಂಕ ಇರುವುದಿಲ್ಲ. ಈ ದ್ವಿಪಕ್ಷೀಯ ಒಪ್ಪಂದದಿಂದಾಗಿ ವಾಣಿಜ್ಯ ವಹಿವಾಟು ವೃದ್ಧಿಸಲಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಬ್ರಿಟಿಷ್ ಮೂಲದ ಹಲವಾರು ಕಂಪನಿಗಳಿದ್ದು, 30,000 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಮುಕ್ತ ವ್ಯಾಪಾರ ಒಪ್ಪಂದದಿಂದ ಇನ್ನೂ ಹೆಚ್ಚು ಪ್ರಮಾಣದಲ್ಲಿ ಬ್ರಿಟನ್ ಕಂಪನಿಗಳು ಬಂಡವಾಳ ತೊಡಗಿಸಲು ಸಾಧ್ಯವಾಗಲಿದೆ. ನಮ್ಮಲ್ಲಿರುವ ತಂತ್ರಜ್ಞಾನ, ಮೂಲ ಸೌಕರ್ಯ, ಕೈಗಾರಿಕಾ ಸ್ನೇಹಿ ವಾತಾವರಣ ಸದ್ಬಳಕೆ ಮಾಡಿಕೊಳ್ಳಬೇಕು. ರಾಜ್ಯ ಸರ್ಕಾರ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಟ್ರೇಡ್ ಕಮಿಷನರ್ ಹರಿಜಿಂದರ್ ಕಂಗ್, ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್ ಸೇರಿದಂತೆ ಇತರರು ಭಾಗವಹಿಸಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read