ಮಂಗಳೂರು: ಧರ್ಮಸ್ಥಳದ ವಿವಿಧೆಡೆ ನೂರಾರು ಶವಗಳನ್ನು ಹೂತಿಟ್ಟಿದ್ದ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ದೂರುದಾರ ಮಾಸ್ಕ್ ಮ್ಯಾನ್ ತೋರಿಸಿರುವ 17 ಸ್ಥಳಗಳಲ್ಲಿ ಈಗಾಗಲೇ ಅಸ್ಥಿಪಂಜರಕ್ಕಾಗಿ ಶೋಧಕಾರ್ಯ ನಡೆಸಿದರೂ ಒಂದು ಸ್ಥಳವನ್ನು ಹೊರತುಪಡಿಸಿ ಬೇರೆಲ್ಲೂ ಯಾವುದೇ ಅಸ್ಥಿಪಂಜರಗಳ ಅವಶೇಷ ಸಿಕ್ಕಿಲ್ಲ. ಇದರಿಂದ ಎಸ್ ಐಟಿ ತಂಡ ದೂರುದಾರ ಮಂಪರು ಪರೀಕ್ಷೆಗೆ ಮುಂದಾಗಿದೆ ಎನ್ನಲಾಗಿದೆ.
ದೂರುದಾರ ಮಾಸ್ಕ್ ಮ್ಯಾನ್ ತೋರಿಸಿದ್ದ 6 ನೇ ಪಾಯಿಂಟ್ ಹೊರತುಪಡಿಸಿದರೆ ಬೇರೆ ಯಾವುದೇ ಸ್ಥಳದಲ್ಲಿ ಅಸ್ಥಿಪಂಜರ ಸಿಗದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಈನಡುವೆ ದೂರುದಾರ 30 ಕಡೆಗಳಲ್ಲಿ 300ಕ್ಕೂ ಹೆಚ್ಚು ಶವಗಳನ್ನು ತಾನು ಹೂತಿಟ್ಟಿರುವುದಾಗಿ ಎಸ್ ಐಟಿ ಮುಂದೆ ಹೇಳಿಕೆ ನೀಡಿದ್ದಾನೆ. ಅಲ್ಲದೇ ಈಗಾಗಲೇ ಶೋಧ ನಡೆಸಿರುವ ಸ್ಥಳವೂ ಸೇರಿದಂತೆ ತಾನು ತೋರಿಸುವ ಎಲ್ಲಾ ಸ್ಥಳಗಳಲ್ಲಿಯೂ ಜಿಪಿಆರ್ ಬಳಸಿ ಶೋಧ ನಡೆಸುವಂತೆ ಮನವಿ ಮಾಡಿದ್ದಾನೆ.
ಈವರೆಗೂ ನಡೆಸಿರುವ ಶೋಧಕಾರ್ಯದಲ್ಲಿ ಒಂದು ಜಾಗ ಬಿಟ್ಟು ಬೇರೆಲ್ಲೂ ಯಾವುದೇ ಮೂಳೆಗಳು ಸಿಗದಿರುವ ಹಿನ್ನೆಲೆಯಲ್ಲಿ ಹಾಗೂ ದೂರುದಾರ ಮತ್ತಷ್ಟು ಜಾಗ ತೋರಿಸುವುದಾಗಿ ಹೇಳುತ್ತಿರುವ ಹಿನ್ನೆಲೆಯಲ್ಲಿ ಎಸ್ ಐಟಿ ತಂಡ ದೂರುದಾರ ಮಾಸ್ಕ್ ಮ್ಯಾನ್ ನ ಮಂಪರು ಪರೀಕ್ಷೆಗೆ ಸಿದ್ಧತೆ ನಡೆಸಿದೆ. ಮಂಪರು ಪರೀಕ್ಷೆಗಾಗಿ ಕೋರ್ಟ್ ನಿಂದ ಅನುಮತಿ ಪಡೆಯಲು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.