ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತು ಹಾಕಿದ ಆರೋಪ ಹಿನ್ನೆಲೆಯಲ್ಲಿ ರಚಿಸಲಾಗಿದ್ದ ಎಸ್ಐಟಿ 12 ಕಡೆ ಶೋಧ ಕಾರ್ಯ ನಡೆಸಿದೆ. 13ನೇ ಸ್ಥಳದಲ್ಲಿಯೂ ಮೃತದೇಹದ ಅವಶೇಷ ಪತ್ತೆಯಾಗದಿದ್ದರೆ ಎಸ್ಐಟಿ ಶೋಧಕಾರ್ಯ ನಿಲ್ಲಿಸಬೇಕಾಗಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳಿವು ನೀಡಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಮಂಗಳವಾರ ಸಂಜೆ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಮಾತನಾಡಿ, ಧರ್ಮಸ್ಥಳ ಗ್ರಾಮದಲ್ಲಿ ಶವಗಳ ಶೋಧ ಅಥವಾ ಧರ್ಮಸ್ಥಳ ಕ್ಷೇತ್ರದ ಕುರಿತಾಗಿ ಯಾರೊಬ್ಬರೂ ಪ್ರತಿಕ್ರಿಯೆ ನೀಡಬಾರದು. ಪಕ್ಷದ ಶಾಸಕರು ಸೇರಿ ಯಾವರೊಬ್ಬರು ಕೂಡ ಭಾವನಾತ್ಮಕವಾಗಿ ಹೇಳಿಕೆ ನೀಡಬಾರದು ಎಂದು ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ರಾಜ್ಯಾದ್ಯಂತ ಸಾರ್ವಜನಿಕರಿಂದ ಆಗ್ರಹ ವ್ಯಕ್ತವಾದ ಹಿನ್ನೆಲೆಯಲ್ಲಿ ಎಸ್ಐಟಿ ರಚಿಸಲಾಗಿದೆ. ಈ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಇದುವರೆಗೆ ಶೋಧ ಕಾರ್ಯ ನಡೆಸಿದ 12 ಸ್ಥಳಗಳಲ್ಲಿ ಒಂದು ಕಡೆ ಮಾತ್ರ ಮೂಳೆಗಳು ಸಿಕ್ಕಿವೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಧರ್ಮಸ್ಥಳ ಶೋಧ ಕಾರ್ಯಾಚರಣೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. ಎಸ್ಐಟಿ ರಚಿಸಿರುವುದರ ಬಗ್ಗೆ ಜನರಿಂದ ಒಳ್ಳೆಯ ಅಭಿಪ್ರಾಯ ಬಂದಿದೆ. ಧರ್ಮಸ್ಥಳದ ವಿಚಾರದಲ್ಲಿ ಯಾರೂ ಭಾವನಾತ್ಮಕವಾಗಿ ಹೇಳಿಕೆ ನೀಡಬೇಡಿ. 13 ಸ್ಥಳಗಳಲ್ಲಿ ಎಸ್ಐಟಿ ಶೋಧನೆ ಮಾಡಿದೆ. ಒಂದು ಕಡೆ ಮಾತ್ರ ಮೂಳೆ ಸಿಕ್ಕಿವೆ. ಅದು ಮಹಿಳೆಯದ್ದಲ್ಲ, ಪುರುಷನದ್ದು. 13ನೇ ಪಾಯಿಂಟ್ ನಲ್ಲೂ ಮೂಳೆ ಸಿಗದಿದ್ದರೆ ಎಸ್ಐಟಿಯಿಂದ ಶೋಧ ಕಾರ್ಯಚರಣೆ ನಿಲ್ಲಿಸಬೇಕಾಗಬಹುದು ಎಂದು ಸಿಎಂ ತಿಳಿಸಿದ್ದಾರೆ.
ಈ ಬಗ್ಗೆ ಸಚಿವರ ಜೊತೆಗೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಶವ ಶೋಧ ಮುಂದುವರೆಸಬೇಕೇ ಬೇಡವೇ ಎಂದು ತೀರ್ಮಾನ ಮಾಡುತ್ತೇವೆ. ಧರ್ಮಸ್ಥಳದ ವಿಚಾರದಲ್ಲಿ ಯಾರೂ ಕೂಡ ಭಾವನಾತ್ಮಕ ಹೇಳಿಕೆ ನೀಡಬೇಡಿ ಎಂದು ತಿಳಿಸಿದ್ದಾರೆ.