ಬೆಂಗಳೂರು : ಐಟಿಬಿಟಿ ಇಲಾಖೆ ವತಿಯಿಂದ ಸರ್ಕಾರದ ಪ್ರಮುಖ ಅನುದಾನ ಯೋಜನೆಯಾದ ‘ಎಲಿವೇಟ್’ನ 22ನೇ ಆವೃತ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತು ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಲಾಯಿತು. ರಾಜ್ಯವು ಸಮಗ್ರ ಹಾಗೂ ಭವಿಷ್ಯೋನ್ಮುಖ ಉದ್ಯಮಶೀಲತೆಯತ್ತ ಸಾಗುತ್ತಿರುವ ತನ್ನ ಪ್ರಯಾಣದಲ್ಲಿ ಇದು ಮತ್ತೊಂದು ಮಹತ್ವದ ಮೈಲುಗಲ್ಲಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.
ವಿವಿಧ ಕ್ಷೇತ್ರಗಳು ಮತ್ತು ರಾಜ್ಯದ ಎಲ್ಲ ಜಿಲ್ಲೆಗಳಾದ್ಯಂತ ನಾವೀನ್ಯತೆಯನ್ನು ಬೆಳೆಸುವಲ್ಲಿ ರಾಜ್ಯದ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಕರ್ನಾಟಕದಾದ್ಯಂತ 15ನೇ ಆಗಸ್ಟ್ 2025ರಿಂದ ಸ್ಟಾರ್ಟ್ಅಪ್ಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಸರ್ಕಾರ ಪ್ರಕಟಣೆ ತಿಳಿಸಿದೆ.
ಎಲಿವೇಟ್ ಯೋಜನೆಯು ನಾವೀನ್ಯತೆಯ ಆವಿಷ್ಕಾರಿಗಳಿಗೆ ಒಂದು ಬಾರಿಯ ಗರಿಷ್ಠ ₹50 ಲಕ್ಷದವರೆಗೆ ಅನುದಾನ ನೀಡುತ್ತದೆ. ಇದರಿಂದ ಸ್ಟಾರ್ಟ್ಅಪ್ಗಳು ಪ್ರೋಟೋಟೈಪ್ಗಳ ಅಭಿವೃದ್ಧಿ, ಪರಿಕಲ್ಪನೆಯ ದೃಢೀಕರಣ ಮತ್ತು ತಂತ್ರಜ್ಞಾನ ಅಭಿವೃದ್ಧಿಯ ಮೂಲಕ ತಮ್ಮ ವ್ಯವಹಾರಗಳನ್ನು ವಿಸ್ತರಿಸಲು ಬೆಂಬಲ ದೊರೆಯುತ್ತದೆ. ಈ ಯೋಜನೆ ಸಮಗ್ರ ಉದ್ಯಮಶೀಲತಾ ವೇದಿಕೆಯನ್ನು ಕೂಡ ಒದಗಿಸುತ್ತದೆ. ಇದರಲ್ಲಿ ಹಣಕಾಸು, ಮಾರ್ಗದರ್ಶನ, ಇನ್ಕ್ಯೂಬೇಶನ್ ಸೌಲಭ್ಯಗಳು ಮತ್ತು ನೆಟ್ವರ್ಕಿಂಗ್ ಅವಕಾಶಗಳಿಗೆ ಪ್ರವೇಶ ದೊರೆಯುತ್ತದೆ.
ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಕಳಕಳಿಯ ಭಾಗವಾಗಿ, ಪ.ಜಾ/ಪ.ಪಂಗಡ ಮತ್ತು ಅಲ್ಪಸಂಖ್ಯಾತ ನವೋದ್ಯಮಿಗಳನ್ನು ಉತ್ತೇಜಿಸಲು ಮೀಸಲಿಟ್ಟ ಅನುದಾನದಡಿ “ಎಲಿವೇಟ್ ಉನ್ನತಿ” ಮತ್ತು “ಎಲಿವೇಟ್ ಅಲ್ಪಸಂಖ್ಯಾತ” ಯೋಜನೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗುವುದು.
ಇದು ಕೇವಲ ಅನುದಾನದ ಯೋಜನೆಯಲ್ಲ, ಅದು ಕಲ್ಪನೆಯಿಂದ ಪ್ರಭಾವದವರೆಗೆ ತಲುಪುವಂತೆ ಸ್ಟಾರ್ಟ್ಅಪ್ಗಳನ್ನು ಸಬಲೀಕರಿಸುವ ಸಂರಚಿತ ವೇದಿಕೆ. ನಾವು ವೇಗವಾದ, ನ್ಯಾಯಸಮ್ಮತ ಮತ್ತು ಹೊಣೆಗಾರಿಕೆಯ ವ್ಯವಸ್ಥೆಯನ್ನು ನಿರ್ಮಿಸಿದ್ದೇವೆ. ಪ್ರತಿ ಆಹ್ವಾನವೂ ಕರ್ನಾಟಕದ ನವೋದ್ಯಮ ಇಕೋ ಸಿಸ್ಟಂನಲ್ಲಿನ ನಮ್ಮ ನಾಯಕತ್ವವನ್ನು ಪುನರುಚ್ಚರಿಸುತ್ತದೆ. ನಾವು ನಾವೀನ್ಯತೆಯನ್ನು ಬೆಂಬಲಿಸುವುದಕ್ಕೆ ಸೀಮಿತರಾಗಿಲ್ಲ, ಅದನ್ನು ಸಂರಚಿಸುವುದು, ವಿಸ್ತರಿಸುವುದು ಮತ್ತು ಜನಮುಖಿಗೊಳಿಸುವುದಾಗಿದೆ.ಎಲಿವೇಟ್ 22ನೇ ಆವೃತ್ತಿಗೆ ಅರ್ಜಿಗಳನ್ನು ಆಗಸ್ಟ್ 15, 2025 ರಿಂದ ಇಲಾಖೆಯ ಅಧಿಕೃತ ಪೋರ್ಟಲ್ನಲ್ಲಿ ಸಲ್ಲಿಸಬಹುದು. ವೆಬ್ಸೈಟ್ ವಿಳಾಸ: eitbt.karnataka.gov.in