ಬೆಂಗಳೂರು: ಬಿ ಖಾತಾ ಸ್ವತ್ತುಗಳಿಗೆ ಎ ಖಾತಾ ನೀಡುವ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಕಾನೂನು ತಜ್ಞರ ಅಭಿಪ್ರಾಯ ಕೋರಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ನಿಯಮ 330ರ ಅಡಿ ಜೆಡಿಎಸ್ ಸದಸ್ಯ ಸಿ.ಎನ್. ಮಂಜೇಗೌಡ ಅವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ.
ಬೆಂಗಳೂರಿನಲ್ಲಿ ಬಿ ಖಾತಾ ಸ್ವತ್ತುಗಳಿಗೆ ಎ ಖಾತಾ ನೀಡಲು ನಿರ್ಧರಿಸಲಾಗಿದೆ. ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯದೆ ಕಂದಾಯ ಭೂಮಿಯಲ್ಲಿ ನಿರ್ಮಿಸಿದ ಬಡಾವಣೆಗಳನ್ನು ಅನಧಿಕೃತವೆಂದು ಘೋಷಿಸಲಾಗಿದೆ. ಇಂತಹ ಬಡಾವಣೆಗಳಲ್ಲಿ ನಿವೇಶನಗಳಿಗೆ ಖಾತಾ ನೀಡುವುದನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಅನಧಿಕೃತ ಬಡಾವಣೆಗಳ ನಿರ್ಮಾಣ ತಡೆಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ ಅಡಿಯಲ್ಲಿ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಅಕ್ರಮ ಬಡಾವಣೆಗಳ ನಿರ್ಮಾಣ ತಡೆಗಟ್ಟಲು ವಿಫಲರಾದ ಅಧಿಕಾರಿಗಳಿಗೆ ದಂಡ ವಿಧಿಸುವ ಅಥವಾ ಅಮಾನತು ಮಾಡುವ, ಸೇವೆಯಿಂದಲೇ ವಜಾಗೊಳಿಸುವ ಅಧಿಕಾರವನ್ನು ಸರ್ಕಾರ ಹೊಂದಿದೆ ಎಂದು ಹೇಳಿದ್ದಾರೆ.