ಹಾಸನ: ಪಿಎಂಎವೈ ವಸತಿ ಯೋಜನೆಯ ಅನುದಾನ ದುರುಪಯೋಗ ಪಡಿಸಿಕೊಂಡಿರುವ ಆರೋಪದಲ್ಲಿ ನೋಡಲ್ ಅಧಿಕಾರಿ ಕೆ.ಎಂ.ರಾಜೇಶ್ ವಿರುದ್ಧ ಕೇಸ್ ದಾಖಲಾಗಿದೆ.
2022ರವರೆಗೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಪಂಚಾಯತ್ ವಸತಿ ನೋಡಲ್ ಅಧಿಕಾರಿಯಾಗಿ ರಾಜೇಶ್ ಕಾರ್ಯ ನಿರ್ವಹಿಸುತ್ತಿದ್ದರು. ಈ ಅವಧಿಯಲ್ಲಿ 2 ಕೋಟಿಗೂ ಅಧಿಕ ಅನುದಾನ ಅಕ್ರಮವೆಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಫಲಾನುಭವಿಗಳು ಮನೆ ನಿರ್ಮಾಣ ಮಾಡಿಕೊಂಡಿರುವ ಬಗ್ಗೆ ಪಿಡಿಒ ತೆಗೆದ ಫೋಟೋವನ್ನು ತಾಲೂಕು ಪಂಚಾಯತ್ ವಸತಿ ನೋಡಲ್ ಅಧಿಕಾರಿ ಪರಿಶೀಲನೆ ನಡೆಸಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾ ಅಧಿಕಾರಿಗೆ ಲಿಖಿತವಾಗಿ ಗಮನಕ್ಕೆ ತರಬೇಕು. ಬಳಿಕ ಜಿಲ್ಲಾ ಪಂಚಾಯತ್ ಲಾಗಿನ್ ಗೆ ಕಳುಹಿಸಬೇಕು. ಅದೇ ರೀತಿ ತಾಲೂಕು ಪಂಚಾಯತ್ ಲಾಗಿನ್ ನಿರ್ವಹಣೆಯನ್ನು ಲಿಖಿತವಾಗಿ ತರುವುದೂ ಕೂಡ ವಸತಿ ನೋಡಲ್ ಅಧಿಕಾರಿ ಕರ್ತವ್ಯ. ಈ ಯಾವುದನ್ನೂ ಮೇಲಾಧಿಕಾರಿಗಳ ಗಮನಕ್ಕೆ ತರದೆ ಎರಡು ಲಾಗಿನ್ ಗಳನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರದ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅರ್ಹ ಫಲಾನುಭವಿಗಳ ಖಾತೆಗೆ ಸರ್ಕಾರದ ಅನುದಾನವನ್ನು ಜಮೆ ಮಾಡದೇ ಬೇರೊಂದು ತಾಲೂಕಿನ ವಿವಿಧ ಖಾತೆದಾರರಿಗೆ ಜಮೆ ಮಾಡಲಾಗಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸಕಲೇಶಪುರ ಠಾಣೆ ಪೊಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.