ಹಾಸನ: ನೈಸರ್ಗಿಕ ಸಂಪತ್ತನ್ನು ಅತೀಯಾಗಿ ಬಳಕೆ ಮಾಡುತ್ತಿದ್ದು, ಪ್ರಕೃತಿ ನಾಶಕ್ಕೂ ಕೂಡಾ ಕಾರಣವಾಗುತ್ತಿದೆ. ಹಾಗಾಗಿ ಹಿತಮಿತವಾಗಿ ಬಳಕೆ ಮಾಡುವುದರ ಜೊತೆಗೆ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ತಿಳಿಸಿದ್ದಾರೆ.
ಚನ್ನರಾಯಪಟ್ಟಣ ತಾಲ್ಲೂಕಿನ ಬೆಲಸಿಂದ ಪ್ರಕೃತಿ ವನದಲ್ಲಿ ನವೀಕರಣಗೊಂಡಿರುವ ಉದ್ಯಾನವನ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ಉದ್ಯಾನವನ ಇರಬೇಕು ಎಂಬ ಯೋಜನೆಯಂತೆ, ಉದ್ಯಾನ ನಿರ್ಮಿಸಲಾಗಿದೆ. ಎಲ್ಲೆಲ್ಲಿ ಇಲ್ಲವೋ ಅಂಥ ಕಡೆ ಉದ್ಯಾನ ನಿರ್ಮಿಸಲಾಗುವುದು. ಸ್ವಚ್ಛ ಪರಿಸರಕ್ಕೆ ಸಸ್ಯಸಂಪತ್ತು ಅತ್ಯವಶ್ಯಕ ಎಂದು ಹೇಳಿದರು.
ಮಾನವ ಮತ್ತು ಪ್ರಾಣಿ ಸಂಘರ್ಷ ಪುರಾತನವಾದುದು, ಇದಕ್ಕೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದ ಅವರು ಅರಣ್ಯ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಜೀವನದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಜೀವ ಮತ್ತು ಜೀವನೋಪಾಯ ಅತಿಮುಖ್ಯ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಅರಿವು ಮೂಡಿಸಲು ಕ್ರಮವಹಿಸಬೇಕಿದೆ ಎಂದರು.
ಜಿಲ್ಲೆಯಲ್ಲಿ ಆನೆಕಾರಿಡಾರ್ ಪ್ರಾರಂಭಿಸಲು 53 ಕೋಟಿ ಮಂಜೂರಾತಿಗೆ ರಾಜ್ಯ ಸಚಿವ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇಲಾಖೆಯಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಕೇಂದ್ರ ಒಪ್ಪಿದ ನಂತರ ಆರಂಭಿಸಲಾಗುವುದು ಎಂದರು.
ರಾಜ್ಯದಲ್ಲಿ 6500 ಆನೆಗಳಿದ್ದು, ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. 565 ಹುಲಿಗಳಿದ್ದು ಎರಡನೇ ಸ್ಥಾನದಲ್ಲಿದೆ. ವನ್ಯಜೀವಿಗಳ ಸಂರಕ್ಷಣೆ ಮಾಡುವ ಹೊಣೆ ಎಲ್ಲರ ಮೇಲಿದೆ ಎಂದ ಅವರು ಸಹಬಾಳ್ವೆ ಅತ್ಯಗತ್ಯ ಎಂದು ತಿಳಿಸಿದರು.
ಇದೇ ವೇಳೆ ಜಿಲ್ಲಾ ಆನೆ ಕಾರ್ಯಪಡೆಯ ಸಮಗ್ರ ತಂತ್ರಜ್ಞಾನ ಆಧಾರಿತ ಥರ್ಮಲ್ ಡ್ರೋನ್ ಸ್ಕ್ವಾಡ್ ಅನ್ನು ಉದ್ಘಾಟಿಸಿದರು. ಈ ಥರ್ಮಲ್ ಡ್ರೋನ್ ಸ್ಕ್ವಾಡ್ ಅನ್ನು ಕಾಡಾನೆ ಮಾನವ ಸಂಘರ್ಷ ಇರುವ ಪ್ರದೇಶಗಳಲ್ಲಿ ಮುಂಜಾನೆ ಮತ್ತು ರಾತ್ರಿ ವೇಳೆಯಲ್ಲಿ ಕಾಡಾನೆಗಳ ಚಲನವಲನಗಳನ್ನು ಪರಿಣಾಮಕಾರಿಯಾಗಿ ಗಮನಿಸಿ ತುರ್ತಾಗಿ ಸಾರ್ವಜನಿಕರಿಗೆ ಹಾಗೂ ಇಲಾಖಾ ಸಿಬ್ಬಂದಿಗಳಿಗೆ ಮಾಹಿತಿ ನೀಡಲು ಉಪಯೋಗಿಸಲಾಗುತ್ತದೆ. ಡ್ರೋನ್ ಸ್ಕ್ವಾಡ್ ವಾಹನವು ಥರ್ಮಲ್ ಡ್ರೋನ್‌ನೊಂದಿಗೆ ಕಂಪ್ಯೂಟರ್ ಸಿಸ್ಟಮ್ ಅನ್ನು ಒಳಗೊಂಡಿದ್ದು, ಕಾಡಾನೆಗಳ ಚಲನವಲನಗಳನ್ನು ವಾಹನದಲ್ಲಿಯೇ ಗಮನಿಸಿಕೊಂಡು ಮಾಹಿತಿಯನ್ನು ನೀಡಬಹುದಾಗಿರುತ್ತದೆ.
ಶಾಸಕ ಸಿ.ಎನ್ ಬಾಲಕೃಷ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಪುರಸಭಾ ಅಧ್ಯಕ್ಷ ಮೋಹನ್, ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು, ಜಿಲ್ಲಾಧಿಕಾರಿ ಲತಾ ಕುಮಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ಸಾಮಾಜಿಕ ಅರಣ್ಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಹನ್ ಕುಮಾರ್, ನಿವೃತ್ತ ವಲಯ ಅರಣ್ಯಾಧಿಕಾರಿ ಧರ್ಮಪ್ಪ, ಪರಿಸರ ಪ್ರೇಮಿಗಳಾದ ಚ.ನಾ.ಆಶೋಕ್ ಹಾಗೂ ಮತ್ತಿತರರು ಹಾಜರಿದ್ದರು.