ಸಂಭಲ್: ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ 40 ಕಿ.ಮೀ ರೋಡ್ ಶೋ ನಡೆಸಿ, ಸಂಭ್ರಮಾಚರಣೆ ನಡೆಸಿದ ಆರೋಪದಲ್ಲಿ ಉತ್ತರ ಪ್ರದೇಶದ ಸಂಭಲ್ ಶಾಹಿ ಜಮಾ ಮಸೀದಿ ನಿರ್ವಹಣಾ ಸಮೀತಿ ಅಧ್ಯಕ್ಷ ಹಾಗೂ ಇತರರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಸಬ್ ಇನ್ಸ್ ಪೆಕ್ಟರ್ ಆಶೀಶ್ ತೋಮರ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಶಾಹಿ ಜಮಾ ಮಸೀದಿ ನಿರ್ವಹಣಾ ಸಮಿತಿಯ ಅಧ್ಯಕ್ಷ ಝಫರ್ ಅಲಿ ಹಾಗೂ ಸರ್ಫರಾಜ್, ತಾಹಿರ್, ಹೈದರ್ ಸೇರಿದಂತೆ 50-60 ಜನ ಅಪರಿಚಿತರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಸಂಭಲ್ ಜಮಾ ಮಸೀದಿಯಲ್ಲಿ ನಡೆದ ಸಮೀಕ್ಷೆ ವೇಳೆ ನಡೆದ ಗಲಭೆ ಸಂಬಂಧ ಅಲಿ ಜೈಲುಸೇರಿದ್ದರು. ಆಗಸ್ಟ್ 1ರಂದು ಮೊರಾದಾಬಾದ್ ಜೈಲಿನಿಂದ ಬಿಡುಗಡೆಯಾಗಿದ್ದರು. ಬಿಡುಗಡೆಯಾದ ಬೆನ್ನಲ್ಲೇ ಮೊರಾದಾಬಾದ್ ನಿಂದ ಸಂಭಲ್ ವರೆಗೆ 40 ಕಿ.ಮೀ ರೋಡ್ ಶೋ ನಡೆಸಿ ಸಂಭ್ರಮಾಚರಣೆ ನಡೆಸಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೋ ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.