ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದ ಯುವಕನ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಟ್ರಯಾಂಗಲ್ ಲವ್ ಸ್ಟೋರಿಯೇ ಹತ್ಯೆಗೆ ಕಾರಣ ಎಂದು ತನಿಖೆಯಲ್ಲಿ ಬಯಲಾಗಿದೆ.
27 ವರ್ಷದ ಗವಿಸಿದ್ದಪ್ಪ ಎಂಬಾತನನ್ನು ಎರಡು ದಿನಗಳ ಹಿಂದೆ ಅನ್ಯಕೋಮಿನ ಯುವಕ ಸಾಧಿಕ್ ಎಂಬಾತ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದ. ಬಳಿಕ ತಾನೇ ಪೊಲೀಸರಿಗೆ ಶರಣಾಗಿದ್ದ. ಹತ್ಯೆಯಾಗಿದ್ದ ಗವಿಸಿದ್ದಪ್ಪ, ಸಾಧಿಕ್ ಪ್ರೀತಿಸುತ್ತಿದ್ದ ಯುವತಿಗೆ ತೊಂದರೆ ಕೊಡುತ್ತಿದ್ದನಂತೆ. ಅದೇ ಕಾರಣಕ್ಕೆ ಸಾಧಿಕ್ ಗವಿಸಿದಪ್ಪನನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಸಾಧಿಕ್ ಪ್ರೀತಿಸುತ್ತಿದ್ದ ಯುವತಿ ಆತನೊಂದಿಗೆ ಬ್ರೇಕಪ್ ಮಾಡಿಕೊಂಡಿದ್ದಳು, ಗವಿಸಿದ್ದಪ್ಪನನ್ನು ಪ್ರೀತಿಸುತ್ತಿದ್ದಳಂತೆ. ಗವಿಸುಇದ್ದಪ್ಪನನ್ನೇ ಮದುವೆಯಾಗುವುದಾಗಿ ಹೇಳಿ ಆತನೊಂದಿಗೆ ಓಡಿಹೋಗಿದ್ದಳು. ಆದರೆ ಯುವತಿ ಅಪ್ರಾಪ್ತೆಯಾಗಿದ್ದ ಕಾರಣ ಹಿರಿಯರು ಗವಿಸಿದ್ದಪ್ಪನಿಗೆ ಬುದ್ಧಿವಾದ ಹೇಳಿದ್ದರು. ಇದಾದ ಬಳಿಕ ಗವಿಸಿದ್ದಪ್ಪ ಸುಮ್ಮನಾಗಿದ್ದ. ವಿಷಯ ತಣ್ಣಗಾಗಿದ್ದರೂ ಸಾಧಿಕ್ ಮಾತ್ರ ಸೇಡಿಗಾಗಿ ಕಾಯುತ್ತಿದ್ದ, ಭಾನುವಾರ ರಾತ್ರಿ ಸಾಧಿಕ್ ಮಾರಕಾಸ್ತ್ರಗಳಿಂದ ಗವಿಸಿದ್ದಪ್ಪನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಸದ್ಯ ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.