ಮಂಡ್ಯ: ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರ ಸ್ವಾಮಿಯವರಿಗೆ ಭೂಗಳ್ಳರಿಂದ ಜೀವ ಬೆದರಿಕೆ ಬಂದಿದೆ. ಸಚಿವ ಎನ್ ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ನರೇಂದ್ರ ಸ್ವಾಮಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಮಳವಳ್ಳಿ ನಕಲಿ ಭೂ ದಾಖಲೆಗಳ ಕೇಂದ್ರವಾಗಿ ಪರಿವರ್ತನೆಯಾಗಿದ್ದು, ಸಬ್ ರಿಜಿಸ್ಟ್ರಾರ್ ಕಚೇರಿ, ತಾಲೂಕು ಕಚೇರಿ, ಸೈಬರ್ ಕೇಂದ್ರಗಳಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗುತ್ತಿದೆ. ಇದರ ಹಿಂದೆ ಒಂದು ದೊಡ್ಡ ನೆಟ್ವರ್ಕ್ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ನಾನು ಶಾಸಕನಾದ ನಂತರ 2500 ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖಾಸಗಿಯವರಿಗೆ ಪರಭಾರೆ ಮಾಡಿರುವುದಾಗಿ ಆರೋಪಿಸಿದ್ದೆ. ನಾನು ಹೋರಾಟ ಮಾಡಿದ ನಂತರ ತನಿಖೆ ನಡೆಸಿ 800 ಎಕರೆ ಭೂಮಿ ವಾಪಸ್ ಬಂದಿದೆ. ಈ ಹಗರಣ ಬೆಳಕಿಗೆ ತಂದ ನಂತರ ನನಗೆ ಭೂಗಳ್ಳರಿಂದ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಆದರೂ ಸರ್ಕಾರಿ ಭೂಮಿ ರಕ್ಷಣೆ ಮಾಡುವುದು ನನ್ನ ಮೊದಲೇ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.
ಕೆಡಿಪಿ ಸಭೆಯಲ್ಲಿ ಶಾಸಕ ನರೇಂದ್ರಸ್ವಾಮಿ ಈ ಬಗ್ಗೆ ಆರೋಪ ಮಾಡಿದ್ದು, ಅಗತ್ಯ ಕ್ರಮಕ್ಕೆ ಸಚಿವ ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.