ಬೆಳಗಾವಿ: ಸರ್ಕಾರಿ ಶಾಲೆಯ ಕುಡಿಯುವ ನೀರಿನ ಟ್ಯಾಂಕ್ ಗೆ ಬಿಕ್ಷಾ ಬೆರೆಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೇರೆ ಧರ್ಮಕ್ಕೆ ಸೇರಿದ ಮುಖ್ಯ ಶಿಕ್ಷಕನನ್ನು ವರ್ಗಾವಣೆ ಮಾಡಿಸಲು ಇಂತಹ ಹೀನ ಕೃತ್ಯ ಎಸಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ 15 ದಿನಗಳ ಹಿಂದೆ ವಿಷಯುಕ್ತ ನೀರು ಸೇವಿಸಿ 11 ಮಕ್ಕಳು ಅಸ್ವಸ್ಥರಾಗಿದ್ದರು. ಈ ಪ್ರಕರಣದಲ್ಲಿ ಶ್ರೀರಾಮ ಸೇನೆಯ ಸವದತ್ತಿ ತಾಲೂಕು ಅಧ್ಯಕ್ಷ ಹೂಲಿಕಟ್ಟಿ ಗ್ರಾಮದ ಸಾಗರ ಪಾಟೀಲ, ಕೃಷ್ಣ ಯಾದವ, ನಾಗನಗೌಡ ಪಾಟೀಲ ಅವರನ್ನು ಬಂಧಿಸಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಭೀಮಾಶಂಕರ ಗುಳೇದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಮುಖ್ಯ ಶಿಕ್ಷಕನನ್ನು ಶಾಲೆಯಿಂದ ಓಡಿಸಲು ಆರೋಪಿಗಳು ಇಂತಹ ಕೃತ್ಯವೆಸಗಿದ್ದಾರೆ. ವಿಷ ಮಿಶ್ರಿತ ನೀರು ಸೇವಿಸಿ ಮಕ್ಕಳು ಮೃತಪಟ್ಟರೆ ಅದಕ್ಕೆ ಮುಖ್ಯ ಶಿಕ್ಷಕನನ್ನು ಹೊಣೆಯಾಗಿಸಿ ಬೇರೆ ಕಡೆ ವರ್ಗಾವಣೆಯಾಗುತ್ತಾರೆ ಎಂದು ಸಂಚು ರೂಪಿಸಿದ್ದರು ಎಂದು ತಿಳಿಸಿದ್ದಾರೆ.
ಕೃಷ್ಣ ಅನ್ಯ ಜಾತಿಯ ಹುಡುಗಿಯನ್ನು ಪ್ರೀತಿಸುತ್ತಿರುವ ಸಂಗತಿ ತಿಳಿದಿದ್ದ ಆರೋಪಿಗಳು ಪ್ರೀತಿಯ ವಿಷಯ ಬಹಿರಂಗಪಡಿಸುವುದಾಗಿ ಬೆದರಿಸಿ ವಿಷ ಬೆರೆಸಲು ಹೇಳಿದ್ದರು. ಶಾಲೆಯ ಅಮಾಯಕ ಬಾಲಕನಿಗೆ ಚಾಕೊಲೇಟ್ ಮತ್ತು 500 ರೂ. ಕೊಟ್ಟು ಪ್ರಚೋದಿಸಿ ನೀರಿನ ಟ್ಯಾಂಕ್ ನಲ್ಲಿ ವಿಷ ಬೆರೆಸಿದ್ದಾರೆ ಎಂದು ಹೇಳಿದ್ದಾರೆ.