ರಾಂಚಿ: ರಾಧೇ, ರಾಧೇ…ಎಂದು ಶುಭಕೋರಿದ್ದಕ್ಕೆ ಮೂರು ವರ್ಷದ ವಿದ್ಯಾರ್ಥಿನಿಯನ್ನು ಹಿಡಿದು ಥಳಿಸಿದ್ದ ಪ್ರಾಂಶುಪಾಲೆ ಬಳಿಕ ವಿದ್ಯಾರ್ಥಿನಿ ಬಾಯಿಗೆ ಟೇಪ್ ಅಂಟಿಸಿ ಹಿಂಸಿಸಿದ್ದ ಘಟನೆ ಛತ್ತೀಸ್ ಗಢದ ದರ್ಗ್ ಜಿಲ್ಲೆಯ ಬಾಗ್ದುಮರ್ ಗ್ರಾಮದಲ್ಲಿ ನಡೆದಿದೆ.
ಮದರ್ ಥೆರೇಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ಘಟನೆ ನಡೆದಿದೆ. ನರ್ಸರಿ ಓದುತ್ತಿದ್ದ ಮೂರು ವರ್ಷದ ವಿದ್ಯಾರ್ಥಿನಿ ರಾಧೇ, ರಾಧೇ…ಎಂದು ಶುಭಕೋರಿದ್ದಾರೆ. ಇಷ್ಟಕ್ಕೇ ಕೋಪಗೊಂಡ ಶಾಲೆಯ ಪ್ರಾಂಶುಪಾಲೆ ವಿದ್ಯಾರ್ಥಿನಿಗೆ ಮನಬಂದಂತೆ ಥಳಿಸಿದ್ದಾರೆ. ಅಷ್ಟೇ ಅಲ್ಲ ಬಾಲಕಿ ಬಾಯಿಗೆ ಟೇಪ್ ಅಂಟಿಸಿ ಕ್ರೌರ್ಯ ಮೆರೆದಿದ್ದಾರೆ. ಪ್ರಾಂಶುಪಾಲೆಯ ವರ್ತನೆ ವಿರುದ್ಧ ನಂದಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿನಿ ಮೇಲೆ ಹಲ್ಲೆ ಹಿನ್ನೆಲೆಯಲ್ಲಿ ಪ್ರಾಂಶುಪಾಲೆ ಇಲಾ ಎವವನ್ ಕಾಲ್ವಿನ್ ಅವರನ್ನು ಬಂಧಿಸಲಾಗಿದೆ. ಧಾರ್ಮಿಕ ಭಾವನೆಗೆ ಅಡ್ಡಿ, ಮಗುವಿನ ಮೇಲೆ ಕ್ರೌರ್ಯ ಹಾಗೂ ಇತರ ಅಪರಾಧಗಳ ಕಾರಣಕ್ಕೆ ಪ್ರಾಂಶುಪಾಲೆ ಕಾಲ್ವಿನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳ ಅಡಿ ಎಫ್ಐಆರ್ ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.