ದಾವಣಗೆರೆ: ಕಾಲು ಕೆಜಿ ಚಿನ್ನದ ನಾಣ್ಯ ನೀಡುವುದಾಗಿ ನಂಬಿಸಿ 5 ಲಕ್ಷ ರೂಪಾಯಿ ವಂಚಿಸಿ ಖದೀಮರು ಪರಾರುಯಾಗಿರುವ ಘಟನೆ ದಾವಣಗೆರೆಯ ಕುರ್ಕಿ ಗ್ರಾಮದಲ್ಲಿ ನಡೆದಿದೆ.
ಹುಬ್ಬಳ್ಳಿ ಮೂಲದ ಸುರೇಶ್ ಎಂಬಾತನಿಂದ ವ್ಯಕ್ತಿಯೊಬ್ಬರು 5 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಚಿಂಪುಗಾನಹಳ್ಳಿ ನಿವಾಸಿ ರಂಗನಾಥ್ ಹಣ ಕಳೆದುಕೊಂಡವರು.
ವರ್ಷದ ಹಿಂದೆ ಗೊರವನಹಳ್ಲಿ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ರಂಗನಾಥ್ ಅವರಿಗೆ ಸುರೇಶ್ ಪರಿಚಯವಾಗಿದೆ. ಆಗ ತಮ್ಮ ಮೊಬೈಲ್ ಸಂಖ್ಯೆಯನ್ನು ಪರಸ್ಪರ ವಿನಿಮಯ ಮಾಡಿಕೊಂಡಿದ್ದರು. ಕೆಲ ದಿನಗಳ ಬಳಿಕ ಸುರೇಶ್, ರಂಗನಾಥ್ ಅವರಿಗೆ ಕರೆ ಮಾಡಿ, ತಮ್ಮ ಹಳೆ ಮನೆ ತೆರವುಗೊಳಿಸಿದಾಗ ಹಳೆ ನಾಣ್ಯಗಳು ಪತ್ತೆಯಾಗಿವೆ. ಅದನ್ನು ಕಡಿಮೆ ಬೆಲೆಗೆ ನಿಮಗೆ ಬೇಕಾದರೆ ಕೊಡುತ್ತೇನೆ ಎಂದಿದ್ದರು. ಆರಂಭದಲ್ಲಿ ಸುರೇಶ್, ಒಂದು ಅಸಲಿ ಚಿನ್ನದ ನಾಣ್ಯ ಕೊಟ್ಟು ನಂಬಿಕೆ ಹುಟ್ಟಿಸಿದ್ದ. ಬಳಿಕ ರಂಗನಾಥ್ ಅವರನ್ನು ದಾವಣಗೆರೆಯ ಕುರ್ಕಿ ಗ್ರಾಮಕ್ಕೆ ಬರುವಂತೆ ಹೇಳಿ ಕಾಲು ಕೆಜಿ ನಕಲಿ ಚಿನ್ನದ ನಾಣ್ಯಗಳನ್ನು ಕೊಟ್ಟು 5 ಲಕ್ಷ ರೂಪಾಯಿ ಹಣ ಪಡೆದು ಪರಾರಿಯಾಗಿದ್ದಾನೆ.
ನಾಣ್ಯಗಳನ್ನು ತೆಗೆದುಕೊಂಡು ಬಂದ ರಂಗನಾಥ್ ಅದನ್ನು ಪರೀಕ್ಷಿಸಿದಾಗ ಎಲ್ಲವೂ ನಕಲಿ ನಾಣ್ಯ ಎಂಬುದು ಗೊತ್ತಾಗಿದೆ. ಹದಡಿ ಠಾಣೆಯಲ್ಲಿ ರಂಗನಾಥ್ ದೂರು ದಾಖಲಿಸಿದಾರೆ. ಹಣ ಪಡೆದ ಆರೋಪಿ ಪರಾರಿಯಾಗಿದ್ದಾರೆ.