ಬೆಳಗಾವಿ: ರಾಜ್ಯದಲ್ಲಿ ಕಾರ್ಮಿಕರ ಕಲ್ಯಾಣಕ್ಕೆ ವಿವಿಧ ಯೋಜನೆಗಳನ್ನು ಜಾರಿಗೊಳಿಸುವುದು ಅನಿವಾರ್ಯವಾಗಿದ್ದು, ಹೀಗಾಗಿ ಡೀಸೆಲ್ ಮತ್ತು ಪೆಟ್ರೋಲ್ ಮೇಲೆ ಸೆಸ್ ವಿಧಿಸಿ ಕಾರ್ಮಿಕರ ಕಲ್ಯಾಣಕ್ಕೆ ಬಳಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಬೆಳಗಾವಿಯ ಯಮನಾಪುರ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ ಶ್ರಮಿಕ ತಾತ್ಕಾಲಿಕ ವಸತಿ ಸಮಚ್ಚಯ ಉದ್ಘಾಟನೆ ಹಾಗೂ ಅಸಂಘಟಿತ ವರ್ಗಗಳ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ರಾಜ್ಯದ ಜನತೆಗೆ ಮತ್ತಷ್ಟು ತೆರಿಗೆ ಹೆಚ್ಚಳದ ಸುಳಿವು ನೀಡಿದ್ದಾರೆ.
ಸಿನಿ ಮಿಲ್ ಯೋಜನೆಯಡಿ ಸಿನಿಮಾ ಟಿಕೆಟ್ ಮೇಲೆ ಸೆಸ್ ಮೊತ್ತ ಸಂಗ್ರಹಿಸಿ ಗೊಂಬೆ ಆಟ ಆಡಿಸುವವರು, ನಾಟಕ ಕಲಾವಿದರು ಸೇರಿದಂತೆ ಸಿನಿಮಾ ಕಾರ್ಮಿಕರಿಗೆ ವಿವಿಧ ಸೌಲಭ್ಯ ಒದಗಿಸಬಹುದು. ಟ್ರಾನ್ಸ್ ಪೋರ್ಟ್ ಬಿಲ್ ಮೂಲಕ ಸೆಸ್ ಸಂಗ್ರಹಿಸಿ ವಾಣಿಜ್ಯ ವಾಹನಗಳನ್ನು ಓಡಿಸುವ ಕಾರ್ಮಿಕರಿಗೆ ಅಪಘಾತ ವಿಮೆ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ. ಅದೇ ರೀತಿ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಹೆಚ್ಚಳ ಮಾಡುವ ಚಿಂತನೆ ಇದೆ. ಕೇವಲ ಒಂದು ರೂಪಾಯಿ ಹೆಚ್ಚಳ ಮಾಡಿದರೂ ಸಾವಿರಾರು ಕೋಟಿ ರೂಪಾಯಿ ಹಣ ಸಂಗ್ರಹವಾಗುತ್ತದೆ. ಇದರಿಂದ ತೈಲ ಬಳಸುವವರಿಗೆ ಹೊರೆ ಆಗುವುದಿಲ್ಲ. ಕಾರ್ಮಿಕರ ಬೇಡಿಕೆ ಈಡೇರಿಸಬಹುದಾಗಿದೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.