ಚಿತ್ರದುರ್ಗ: ಜಾತಿ ಮಠಗಳಿಂದ ಸಮಾಜ ಕಲುಷಿತಗೊಳ್ಳುತ್ತಿದೆ ಎಂಬ ಹೇಳಿಕೆ ನೀಡಿರುವುದು ರಂಭಾಪುರಿ ಪೀಠದ ಸ್ವಾಮೀಜಿಯ ಕಲುಷಿತ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೀಠದಲ್ಲಿ ಕುಳಿತವರು ತಪ್ಪು ಹೇಳಿಕೆ ನೀಡಿ ಸಮಾಜದಲ್ಲಿ ಒಡಕು ಮೂಡಿಸಬಾರದು ಎಂದು ಹೇಳಿದ್ದಾರೆ.
ಕಲುಷಿತ ಮನಸ್ಥಿತಿ ಇರುವವರು ಮಾತ್ರ ಈ ರೀತಿ ಮಾತನಾಡಲು ಸಾಧ್ಯ. ಜಾತಿ ಮಠಗಳಿಂದ ಸಮಾಜ ಕಲುಷಿತಗೊಳ್ಳುತ್ತಿದೆ ಎಂದು ಹೇಳುವ ನೈತಿಕ ಹಕ್ಕು ರಂಭಾಪುರಿ ಶ್ರೀಗಳಿಗೆ ಇಲ್ಲ. ಪಂಚಮಸಾಲಿ ಪೀಠಗಳ ಉಗಮಕ್ಕೆ ಕಾರಣವೇನು ಎಂಬ ಬಗ್ಗೆ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
2003ರಲ್ಲಿ ಪಂಚ ಪೀಠದವರು ಎಸ್.ಸಿ. ಸಮುದಾಯದವರು ಎಂದು ಹೇಳಿಕೊಂಡು ಆಗಿನ ಪ್ರಧಾನಿ ವಾಜಪೇಯಿಗೆ, ಲಾಲಕೃಷ್ಣ ಅಡ್ವಾಣಿ ಅವರ ಬಳಿಗೆ ಹೋಗಿ ಪ್ರಮಾಣಪತ್ರ ಕೇಳಿದ್ದರು. ಪಂಚಪೀಠದವರು ವೀರಶೈವ ಲಿಂಗಾಯಿತರಿಗೆ ಎಂದಿಗೂ ಮೀಸಲಾತಿ ಕೇಳಿಲ್ಲ. ಬದಲಿಗೆ ಬೇಡ ಜಂಗಮರಿಗೆ ಮಾತ್ರ ಮೀಸಲಾತಿ ಬೇಕೆಂದು ಕೇಳಿದ್ದರು ಎಂದು ತಿಳಿಸಿದ್ದಾರೆ.
ಜಾತಿ ಪೀಠಗಳು ಜ್ಯೋತಿಯಾಗಿ ಜಾತ್ಯತೀತ ತತ್ವ ಅಳವಡಿಸಿಕೊಂಡಿವೆ. ಹಾಗೆ ನೋಡಿದರೆ ವೀರಶೈವ ಲಿಂಗಾಯತ ಸಮಾಜದಲ್ಲಿ ಪಂಚಪೀಠದವರದ್ದು ಮೈಕ್ರೋ ಸಮಾಜ. ವೀರಶೈವ ಲಿಂಗಾಯಿತರಲ್ಲಿ ಶೇಕಡ 80ರಷ್ಟು ಪಂಚಮಸಾಲಿ ಜನರಿದ್ದಾರೆ. ಊರಿಗೆ ಎರಡು ಮೂರು ಪಂಚಪೀಠದ ಅನುಯಾಯಿಗಳ ಮನೆ ಇದ್ದರೆ ಅದೇ ಹೆಚ್ಚು. ಅವರು ಪೂಜೆ ಪುನಸ್ಕಾರ ಮಾಡುವ ಸಮುದಾಯದ ಸ್ವಾಮೀಜಿಗಳು ಎಂದು ಹೇಳಿದ್ದಾರೆ.
ವೀರಶೈವ ಲಿಂಗಾಯಿತ ಒಳಪಂಗಡ ಒಂದಾಗಬೇಕೆಂಬುದು ನಮ್ಮ ಆಶಯವಾಗಿದೆ. ಆದರೆ ದಾವಣಗೆರೆಯಲ್ಲಿ ಪಂಚಪೀಠಾಧೀಶರ ನೇತೃತ್ವದಲ್ಲಿ ನಡೆದ ಶೃಂಗ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳಿಗೆ ಪಂಚಮಸಾಲಿ ಸಮಾಜಕ್ಕೆ ಸಂಬಂಧವಿಲ್ಲ. ಪೀಠದಲ್ಲಿ ಕುಳಿತವರ ಹೇಳಿಕೆಗಳಿಂದ ಒಡಕು ಮೂಡಿದೆ. ವೀರಶೈವ ಲಿಂಗಾಯತ ಒಳಪಂಗಡ ಒಂದಾಗಬೇಕು. ಆಗಸ್ಟ್ 10 ರಂದು ಪಂಚಮಸಾಲಿ ಪೀಠದಲ್ಲಿ ಸಮಾಜದ ಸಭೆ ಕರೆದಿದ್ದು ಅಲ್ಲಿ ಕೈಗೊಂಡ ನಿರ್ಣಯಗಳನ್ನು ಸಮಾಜ ಬಾಂಧವರಿಗೆ ತಿಳಿಸಲಾಗುವುದು. ಜಾತಿಗಣತಿಯಲ್ಲಿ ಏನು ಬರೆಸಸಬೇಕು ಎಂಬುದರ ಬಗ್ಗೆ ಸಂದೇಶ ನೀಡಲಾಗುವುದು ಎಂದು ಹೇಳಿದ್ದಾರೆ.