ಮೈಸೂರು: ಮೈಸೂರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗಿಂತ ಸಿಎಂ ಸಿದ್ದರಾಮಯ್ಯ ಕೊಡುಗೆ ಜಾಸ್ತಿ ಎಂದು ಹೇಳಿಕೆ ನೀಡಿದ್ದ ಸಿಎಂ ಸಿದ್ದರಾಮಯ್ಯ ಪುತ್ರ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಯತೀಂದ್ರ ಹೇಳಿಕೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಸಿಎಂ ಸಿದ್ದರಾಮಯ್ಯ ಅವರು ದೇವರಾಜ ಅರಸುಗಿಂತ ದೊಡ್ಡವರು ಎಂದು ಹೇಳಿಕೊಳ್ಳುತ್ತಿದ್ದರು. ಈಗ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗಿಂತ ದೊಡ್ಡವರಾಗಿದ್ದಾರೆ. ಇನ್ನೂ 10 ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಿದ್ದರೆ ನಾಡದೇವತೆ ಚಾಮುಂಡಿಗಿಂತ ದೊಡ್ಡವರೆಂದು ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಕ್ಕಳಿಗೆ ಆಸ್ತಿಯನ್ನು ಮಾಡಿಕೊಡಬಹುದು. ಆದರೆ ತಲೆಯಲ್ಲಿ ಬುದ್ಧಿ ತುಂಬಿಕೊಡಲು ಸಾಧ್ಯವಿಲ್ಲ ಅಂತ ಯತೀಂದ್ರ ಅವರ ಇಂತಹ ಹೇಳಿಕೆಗಳಿಂದ ಅರ್ಥಮಾಡಿಕೊಳ್ಳಬೇಕು. ಇದು ಯತೀಂದ್ರ ಅವರ ಮಾತಲ್ಲ ಸಿಎಂ ಸಿದ್ದರಾಮಯ್ಯ ಅವರ ಅಂತರಾಳದ ಭಾವನೆ ಕೂಡ ಆಗಿದೆ. ಮಹಾರಾಜರ ಕುಟುಂಬದ ಬಗ್ಗೆ ಸಿದ್ದರಾಮಯ್ಯ ಅವರಿಗೆ ದ್ವೇಷ, ಅಪಥ್ಯಾ ಭಾವನೆ ಇದೆ ಎಂದು ಗುಡುಗಿದರು.
ಯತೀಂದ್ರ ಅವರೇ ಮೈಸೂರಿಗೆ ನಿಮ್ಮಪ್ಪನ ಕೊಡುಗೆ ಏನು ಹೇಳಿ? ಕೆ.ಆರ್.ಆಸ್ಪತ್ರೆಗೆ ಸುಣ್ಣಹೊಡೆಸಲು ನಿಮ್ಮಪ್ಪನ ಕೈಲಿ ಆಗಿಲ್ಲ. ನಿಮ್ಮ ಅಪ್ಪ-ಅಮ್ಮ ಸೇರಿ ಮೂಡಾದಲ್ಲಿ ಸೈಟು ಹೊಡೆದರು. ಅದೇನಾ ನಿಮ್ಮಪ್ಪನ ಕೊಡುಗೆ? ಎಂದು ಪ್ರಶ್ನಿಸಿದ್ದಾರೆ.
ನಾಲ್ವಡಿ ಮಹಾರಾಜರು ನಾಡ ಬೆಳಗಿದವರು. ಯತೀಂದ್ರ ಅವರೇ ನೀವು ವರ್ಗಾವಣೆಯಲ್ಲಿ ಒಳ್ಳೆ ಕಮಾಯಿ ಮಾಡಿಕೊಂಡು ಆರಾಮವಾಗಿರಿ. ಅದನ್ನು ಬಿಟ್ಟು ಇಂತಹ ಹೇಳಿಕೆಗಳನ್ನು ನೀಡಿ ಓಡಾಡೋದು ಬೇಡ ಎಂದು ಕಿಡಿಕಾರಿದ್ದಾರೆ.