ಬೆಂಗಳೂರು: ನವದೆಹಲಿಯ ಕರ್ನಾಟಕ ಭವನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವಿಶೇಷಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಹೆಚ್.ಆಂಜನೇಯ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ.
ಹೆಚ್.ಆಂಜನೇಯ ದರ್ಪದಿಂದ ವರ್ತಿಸುತ್ತಿದ್ದು, ಸಿಬ್ಬಂದಿಗಳನ್ನು ಅಗೌರವದಿಂದ ಕಾಣುತ್ತಿದ್ದಾರೆ ಎಂದು ಮಹಿಳಾ ಸಿಬ್ಬಂದಿಯೊಬ್ಬರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ದೆಹಲಿ ಕರ್ನಾಟಕ ಭವನದಲ್ಲಿ ಉಪ ಸಮನ್ವಯಾಧಿಕಾರಿ ಮತ್ತು ಲೆಕ್ಕಪತ್ರ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ದೂರುದಾರೆ ಕುಸುಮಾ ಪಿ.ನಂದಗಿರಿ, ಹೆಚ್.ಆಂಚನೇಯ ವಿರುದ್ಧ ದೂರು ನೀಡಿದ್ದಾರೆ. ಮಹಿಳಾ ನೌಕರರು ಅಸುರಕ್ಷಿತ ವಾತಾವರಣದಲ್ಲಿ ಕೆಲಸ ಮಾಡಬೇಕಾದ ಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹೆಚ್.ಆಂಜನೇಯ ಪ್ರಸ್ತುತ ಕರ್ನಾಟಕ ಭವನದಲ್ಲಿ ಕಚೇರಿ ಅಧೀಕ್ಷಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಚೇರಿ ವಿಚಾರದಲ್ಲಿ ಲೆಕ್ಕ ಶಾಖೆಯ ಸಿಬ್ಬಂದಿಯನ್ನು ಕರೆದು ಬಾಯಿಗೆ ಬಂದಂತೆ ಮಾತನಾಡುವುದಲ್ಲದೇ, ಲೆಕ್ಕಾಧಿಕಾರಿ ಏನು ಕತ್ತೆ ಕಾಯುತ್ತಿದ್ದಾಳಾ? ಎಂದು ಅಗೌರವದಿಂದ ಮಾತನಾಡುತ್ತಾರೆ. ಉಪಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಎಂಬ ದರ್ಪದಿಂದ ಪ್ರತಿ ದಿನ ಕಚೇರಿಯ ಕರ್ತವ್ಯದ ಅವಧಿಯಲ್ಲಿ ನೌಕರರಿಗೆ ಪ್ರತಿ ಮಾತು ಮಾತಿಗೂ ಅವಹೇಳನ ಮಾಡುತ್ತಿದ್ದಾರೆ. ಅಶ್ಲೀಲ, ಅವಹೇಳನಕಾರಿ ಪದಗಳನ್ನು ಪ್ರಯೋಗಿಸುತ್ತಾರೆ. ಮಹಿಳಾ ನೌಕರರಿಗೂ ಅಸಭ್ಯ ಪದಗಳಿಂದ ಮಾತನಾಡುತ್ತಾರೆ. ನಿಮ್ಮನ್ನು ಅಮಾನತು ಮಾಡುತ್ತೇನೆ. ವಜಾಗೊಳಿಸುತ್ತೇನೆ ಎಂದು ಬೆದರಿಕೆ ಹಾಕುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.