ಕೊಪ್ಪಳ : ಯೂರಿಯಾ ಗೊಬ್ಬರ ಸಿಗದಿದ್ದಕ್ಕೆ ರಾಜ್ಯಾದ್ಯಂತ ರೈತರು ಪರದಾಟ ನಡೆಸಿದ್ದು, ಆಕ್ರೋಶ ಹೊರ ಹಾಕಿದ್ದಾರೆ.
ಕೊಪ್ಪಳದ ಗಂಜ್ ವೃತ್ತದಲ್ಲಿ ರೈತರೊಬ್ಬರು ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಂದ್ರಪ್ಪ ಬಡಿಗಿ ಎಂಬ ರೈತ ನೆಲದಲ್ಲಿದ್ದ ಮಣ್ಣು ತಿಂದು ಆಕ್ರೋಶ ಹೊರ ಹಾಕಿದ್ದಾರೆ. ಬೆಳೆ ಬೆಳೆಯಲು ಗೊಬ್ಬರ ಸಿಗುತ್ತಿಲ್ಲ, ನಾವೇನು ಹೊಟ್ಟೆಗೆ ಮಣ್ಣು ತಿನ್ನೋದಾ ಎಂದು ಕಿಡಿಕಾರಿದ್ದಾರೆ. ಗೊಬ್ಬರ ಕೊಳ್ಳಲು ಅಂಗಡಿಗೆ ಬಂದರೆ ನೋ ಸ್ಟಾಕ್ ಎಂದು ಬೋರ್ಡ್ ಹಾಕಿದ್ದಾರೆ, ನಾವೇನು ಮಾಡೋದು..ಹೊಲಕ್ಕೆ ಏನು ಹಾಕೋದು ಎಂದು ರೈತರು ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯದ ಹಲವು ಕಡೆ ಪ್ರತಿಭಟನೆ
ರಾಜ್ಯದಲ್ಲಿ ಬೇಡಿಕೆಗೆ ಅನುಗುಣವಾಗಿ ಯೂರಿಯಾ ಗೊಬ್ಬರ ಸಿಗದೇ ಇರುವುದರಿಂದ ರೈತರು ಕಂಗಾಲಾಗಿದ್ದು, ಪ್ರತಿಭಟನೆ ನಡೆಸಿದರು. ಕೃಷಿ ಕೆಲಸ ಬಿಟ್ಟು ಅಂಗಡಿಗಳಿಗೆ ಗೊಬ್ಬರ ಹುಡುಕಿಕೊಂಡು ಅಲೆದಾಡುವ ಸ್ಥಿತಿ ನಿರ್ಮಾಣ ವಾಗಿದೆ. ಗದಗ, ಹಾವೇರಿ, ಕೊಪ್ಪಳ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ತೀವ್ರ ಅಭಾವ ಸೃಷ್ಟಿಯಾಗಿದ್ದು, ನಿನ್ನೆ ಹಲವು ಕಡೆ ಪ್ರತಿಭಟನೆಗಳು ನಡೆದಿವೆ.ಗದಗ ಜಿಲ್ಲೆ ಲಕ್ಷ್ಮೀಶ್ವರದಲ್ಲಿ ರೈತರು ಚಳಿ, ಮಳೆ ಲೆಕ್ಕಿಸದೆ ಕಾದು ಗೊಬ್ಬರ ಪಡೆದಿದ್ದಾರೆ.ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಗೊಬ್ಬರಕ್ಕಾಗಿ ಬೆಳಿಗ್ಗೆಯಿಂದಲೇ ರೈತರು ಸರದಿಯಲ್ಲಿ ನಿಂತಿದ್ದರು.