ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಧರ್ತಿ ಅಬಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ (DA-JGUA) ಮತ್ತು ಪ್ರಧಾನಮಂತ್ರಿ ಜನಜಾತೀಯ ಉನ್ನತ ಗ್ರಾಮ ಅಭಿಯಾನ (PM-JGUA) ಅಂಗವಾಗಿ ಪ್ರವಾಸೋದ್ಯಮ ಸಚಿವಾಲಯದಿಂದ ಬುಟಕಟ್ಟು ಹಾಗೂ ಆದಿವಾಸಿ ಸಮುದಾಯವಿರುವ ಗ್ರಾಮಗಳಲ್ಲಿ ಅತಿಥ್ಯಾಧಾರಿತ ಹೋಂಸ್ಟೇ ನಿರ್ಮಾಣಕ್ಕೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಪ್ರವಾಸೋದ್ಯಮಕ್ಕೆ ಉತ್ತೇಜನ, ಸ್ಥಳೀಯ ಜನರಿಗೆ ಖಾಯಂ ಸ್ವಯಂ ಉದ್ಯೋಗ ಅವಕಾಶ, ಬುಡಕಟ್ಟು, ಅದಿವಾಸಿ ಸಂಸ್ಕøತಿ, ಪರಂಪರೆ ಮತ್ತು ನೈಸರ್ಗಿಕ ಸಂಪತ್ತನ್ನು ಪ್ರವಾಸಿಗರಿಗೆ ಪರಿಚಯಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಈ ಯೋಜನೆಯಡಿ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ 23, ಚಳ್ಳಕೆರೆ 32, ಚಿತ್ರದುರ್ಗ 17, ಹೊಳಲ್ಕೆರೆ 8, ಹೊಸದುರ್ಗ 4, ಹಿರಿಯೂರಿನ 3 ಗ್ರಾಮಗಳು ಸೇರಿ ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 87 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆ ಮಾಡಿರುವ ಗ್ರಾಮಗಳಲ್ಲಿ ಹೋಂಸ್ಟೇಗಳನ್ನು ಅಭಿವೃದ್ಧಿಪಡಿಸಲು ಸ್ಥಳೀಯ ಬುಡಕಟ್ಟು, ಆದಿವಾಸಿ ಸಮುದಾಯಗಳಿಗೆ ಪ್ರತಿ ಹೋಂಸ್ಟೇ ನಿರ್ಮಾಣಕ್ಕೆ ರೂ.5 ಲಕ್ಷ, ನವೀಕರಣಕ್ಕೆ ರೂ.3 ಲಕ್ಷ ಸಹಾಯಧನವನ್ನು ನೀಡಲಾಗುವುದು. ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಅರ್ಹ ಆಸಕ್ತ ವ್ಯಕ್ತಿಗಳು ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಪ್ರವಾಸೋದ್ಯಮ ಕಚೇರಿಯಲ್ಲಿ ಪಡೆದು, ಅವಶ್ಯಕ ದಾಖಲೆಗಳಾದ ಪರಿಶಿಷ್ಟ ವರ್ಗದ ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಮನೆಯ ದಾಖಲೆ, ಮನೆಯ ಜಿಪಿಎಸ್ ಫೋಟೋ, ಡಿಕ್ಲರೇಷನ್ ಫಾರಂ, ಗ್ರಾಮ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ಎನ್.ಓ.ಸಿ ಗಳೊಂದಿಗೆ ಇದೇ ಜುಲೈ 31 ರೊಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ಕೋಟೆ ಸಮೀಪದ ಕಾಮನಬಾವಿ ಬಡಾವಣೆಯಲ್ಲಿರುವ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿಗೆ ಭೇಟಿ ನೀಡಬಹುದು. ದೂರವಾಣಿ ಸಂಖ್ಯೆ 08194-234466ಗೆ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಟಿ.ವೆಂಕಟೇಶ್ ತಿಳಿಸಿದ್ದಾರೆ.