ನವದೆಹಲಿ: ಡ್ರೋನ್ ಮೂಲಕ ನಿರ್ದಿಷ್ಟ ಪ್ರದೇಶದ ಮೇಲೆ ದಾಳಿ ನಡೆಸುವ ಕ್ಷಿಪಣಿ ಪರೀಕ್ಷೆಯನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ(ಡಿ.ಆರ್.ಡಿ.ಒ.) ಶುಕ್ರವಾರ ಯಶಸ್ವಿಯಾಗಿ ನಡೆಸಿದ್ದು, ಇದರೊಂದಿಗೆ ನಿಖರ ಗುರಿ ತಲುಪುವಲ್ಲಿ ದೇಶದ ಸೇನಾ ಸಾಮರ್ಥ್ಯ ಮತ್ತಷ್ಟು ಹೆಚ್ಚಾಗಿದೆ.
ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ವತಿಯಿಂದ ಅಭಿವೃದ್ಧಿಪಡಿಸಿದ ಉಡಾವಣಾ ಪಥ ನಿರ್ದೇಶಿತ ಕ್ಷಿಪಣಿ ಯುಎಲ್‌ಪಿಜಿಎಂ-ವಿ3 ಪರೀಕ್ಷೆಯನ್ನು ಆಂಧ್ರಪ್ರದೇಶದ ಕರ್ನೂಲ್ ನಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.
ಯಾವುದೇ ವೈಮಾನಿಕ ಪರಿಸ್ಥಿತಿಯಲ್ಲಿ ಯುಎಲ್‌ಪಿಜಿಎಂ-ವಿ3 ಉಡಾವಣೆ ವ್ಯವಸ್ಥೆಯನ್ನು ಬಳಕೆ ಮಾಡಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದ್ದು, ನಿಖರವಾಗಿ ಗುರಿ ತಲುಪುವಂತೆ ಹಗುರ ಮಾದರಿಯ ಯುದ್ಧ ಸಾಧನವಾಗಿ ಇದನ್ನು ರೂಪಿಸಲಾಗಿದೆ.
ಫೈರ್ ಅಂಡ್ ಫರ್ಗೆಟ್ ಮಾದರಿಯ ಗಾಳಿಯಿಂದ ಭೂಮಿಗೆ ಹಾರಬಲ್ಲ ಕ್ಷಿಪಣಿ ಇದಾಗಿದ್ದು, ಹಗಲಿನಲ್ಲಿ 4 ಕಿಲೋಮೀಟರ್, ರಾತ್ರಿಯಲ್ಲಿ 2.5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗುರಿ ಹೊಡೆಯುವ ಸಾಮರ್ಥ್ಯ ಹೊಂದಿದೆ. ಭೂಗತವಾಗಿಯೂ ನುಗ್ಗಿ ಬಂಕರ್ ಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ.